ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಅಪ್ಪ ಕೇವಲ ಎರಡು ಅಕ್ಷರವಾದರೂ ಅದರ ಹಿಂದಿರುವ ಭಾವ ಅಳೆಯಲಾಗದ್ದು. ಅಪ್ಪ ಪ್ರತಿಯೊಬ್ಬ ಹೆಣ್ಣು ಮಕ್ಕಳ ಹೀರೋ. ಅವ್ವನ ಮಡಿಲಲ್ಲಿ ಬೆಚ್ಚಗೆ ಇದ್ದವರಿಗೆ, ಅಪ್ಪನ ಹೆಗಲ ಕಾವು ಬೇಗನೇ ಅರ್ಥವಾಗುವುದಿಲ್ಲ. ಇದನ್ನು ಯಾಕೆ ಹೇಳುತ್ತಿದ್ದೆನೆಂದರೆ ನನ್ನ ವಿಷಯದಲ್ಲೂ ಹಾಗೇ ಆಗಿದ್ದು, ಅವ್ವನ ಮಡಿಲು ಸ್ಪಷ್ಟವಾಗಿ ಕಣ್ಮುಂದೆ ಇತ್ತು. ಆದರೆ ಅಪ್ಪನ ಹೆಗಲನ್ನು , ಆತನ ಭಾವ ತಿಳಿಯುವುದಕ್ಕೆ ಇಷ್ಟೊಂದು ಸಮಯ ಬೇಕಾಯಿತೆನೊ.

ಮೊದಲಿನಿಂದಲೂ ಅಪ್ಪ ಬಿಗಿ ಮುಖದವನು. ಕೋಪ ಸದಾ ಮುಖದಲ್ಲಿ ಆಡುತ್ತಿತ್ತು. ಅದರ ಹಿಂದೆ ಮಕ್ಕಳು ಸರಿಯಾದ ದಾರಿಯಲ್ಲಿ ನಡೆಯಬೇಕೆಂಬ ಕಾಳಜಿಯಿತ್ತು. ಇಂದಿಗೂ ಇದೆ. ಅಂತಹ ಅಪ್ಪ ಇದೇ ಕಾರಣಕ್ಕೆನೋ ನನಗೆ ಬೇಗನೆ ಆಪ್ತವಾಗಲೇ ಇಲ್ಲ. ಅವ್ವನ ಮಡಿಲಲ್ಲೆ ಹೆಚ್ಚಾಗಿ ಬೆಳೆದ ನನಗೆ, ಅಪ್ಪ ಬಹು ಸುಲಭಕ್ಕೆ ಅರ್ಥವಾಗಲಿಲ್ಲ.

ಬುದ್ದಿ ಬಲಿತಂತೆ ಅಪ್ಪನ ಕೋಪ,‌ಸಿಡುಕುಗಳ ಪರಿಚಯ, ಅದರ ಹಿಂದಿರುವ ಕಾಳಜಿ‌ ಮೆಲ್ಲ-ಮೆಲ್ಲನೆ ನನ್ನೊಳಗೆ ಅಡಿಯಿಡತೊಡಗಿತ್ತು. ಅಪ್ಪ ಅರ್ಥವಾಗತೊಡಗಿದ ಮೆಲ್ಲನೆ.

ಅಪ್ಪ ಕಲಿಲಿಲ್ಲ. ಆದರೆ ತನ್ನ ಮಕ್ಕಳನ್ನು ಮಾತ್ರ ಚೆನ್ನಾಗಿ ಓದಿಸಿದ. ಅಪ್ಪನಿಗಿರುವ ತಿಳುವಳಿಕೆ, ಅನುಭವ ಅಪ್ಪನ ವಾರಿಗೆಯವರಿಗೂ ಇತ್ತೋ, ಇಲ್ವೋ ಗೊತ್ತಿಲ್ಲ. ಅಪ್ಪ ಕಲಿಯದೇ ಇದ್ದರೂ,ಕನ್ನಡ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲದೆ ಇದ್ದರೂ, ಕಾಶಿ, ದೆಹಲಿ ಹೀಗೆ ಅರ್ಧ ಭಾರತವನ್ನು ಸುತ್ತು ಹಾಕಿದ, ಜೊತೆಗೆ ಅವ್ವನನ್ನು ಕರೆದುಕೊಂಡು.

ಒಮ್ಮೊಮ್ಮೆ ಅಪ್ಪನ ಕೋಪಕ್ಕೆ ಬೈಗುಳಗಳಿಗೆ ಬೇಜಾರಾಗುತ್ತಿತ್ತು. ಅವನ ಮೇಲೆ ಕೋಪ ಬರುವಂತೆ ಮಾಡುತ್ತಿತ್ತು. ನಾನು ಎಂ.ಎ ಕಲಿಯುತ್ತೇನೆ ಎಂದಾಗ, ಬೇಡ ಎಂದನು. ನಂತರ ನನ್ನ ಅಳುಮುಖವನ್ನು ನೋಡಲಾಗದೆ, ಫೀಸು ಕೊಟ್ಟು ಕಲಿ ಎಂದವನು ನನ್ನಪ್ಪ. ಪರೋಕ್ಷವಾಗಿ ಹಣದ ಮೌಲ್ಯ, ಅಕ್ಷರ, ವಿದ್ಯೆಯ ಜ್ಞಾನವನ್ನು ಹೇಳಿ ಕೊಟ್ಟವನು ನನ್ನಪ್ಪ.

ಈ ಹೆತ್ತವರ ಋಣ ಎಂದಿಗೂ ತೀರಿಸಲು ಸಾಧ್ಯವಿಲ್ಲ. ನನ್ನನ್ನು ನನ್ನಪ್ಪ ಕೈ ಹಿಡಿದು ನಡೆಸದೇ ಇದ್ದರೂ, ಮುದ್ದು ಮಾಡದೇ ಇದ್ದರೂ, ಸಿಡುಕಿನಲ್ಲಿ ಬೈದಿದ್ದರೂ, ಇಂದು ನಾನು ಈ ಮಟ್ಟಕ್ಕೆ ಬೆಳೆಯುವುದಕ್ಕೆ ಕಾರಣ  ನನ್ನಪ್ಪ. ಅಪ್ಪ ಎಲ್ಲರಂತವನಲ್ಲ, ಆಕಾಶದಂತವನು. ಅಪ್ಪನ ಕಾಳಜಿ, ತಿಳಿಯಲು ನನಗೆ ಇಷ್ಟು ಸಮಯವೇ ಬೇಕಾಯಿತೆನೊ ಗೊತ್ತಿಲ್ಲ. ಸಿಡುಕಿನ ಹಿಂದಿರುವ ಪ್ರೀತಿ ಈಗ ಅರಿವಾಗಿದೆ‌. ಮನದ ತೆರೆಯನ್ನು ಸರಿಸಿದೆ. ಅಪ್ಪನ ಮೇಲಿನ ಗೌರವ ಮತ್ತೊಷ್ಟು ಹೆಚ್ಚಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹಿತ್ತಲು ಎಂಬ ಕಾಡುವ ರೂಪಕ..!!

ಡಿಗ್ರಿ ಮುಗಿತು ಮುಂದೇನು?