ಹಿತ್ತಲು ಎಂಬ ಕಾಡುವ ರೂಪಕ..!!

ಪ್ರತಿಯೊಂದು ಮನೆಗೂ ಒಂದೊಂದು ಹಿತ್ತಲು ಹಾಗೂ ಹಿಂಬಾಗಿಲು ಎಂಬುದೊಂದು ಇರಲೇಬೇಕು. ಪ್ರತಿಯೊಂದು ಮನೆಗೂ ಆ ಮನೆಯ ಹಿತ್ತಲೇ ಭೂಷಣ. ಈಗಿನ ಸಿಟಿ ಮನೆಗಳಲ್ಲಿ ಹಿತ್ತಲು ಎನ್ನುವುದು ಗೊತ್ತಿರುವುದಾಗಿರಲಿ ಮನೆ ಸಿಕ್ಕರೆ ಸಾಕು ಎನ್ನುವ ಹಾಗಿರುತ್ತದೆ. ಆದರೆ ಹಳ್ಳಿಯ ಕಡೆ ಹಾಗಲ್ಲ. ಅಲ್ಲಿ ಮನೆ ಜೊತೆಗೆ ಎಲ್ಲರೂ ನೋಡುವುದು ಹಿತ್ತಲು ಇದೆಯೊ ಇಲ್ಲವೊ ಎನ್ನುವುದನ್ನು. ಮುಂಬಾಗಿಲಂತೆ ಹಿಂಬಾಗಿಲು ಎನ್ನುವುದು ಆ ಮನೆಯ ರೂಪಕವಿದ್ದಂತೆ.

ಹಿತ್ತಲು ಎನ್ನುವುದು ಕೇವಲ ಖಾಲಿ ಜಾಗವಲ್ಲ. ಅದೊಂದು ವಿನೂತನ ಪ್ರಪಂಚ. ಹೆಚ್ಚಿನ ಹೆಂಗಳೆಯರ ಮಾತಿನ ಹರಟೆಯ ಜಾಗವದು. ಹಿತ್ತಲಿನಲ್ಲಿ ಸದ್ದಾಗದೆ ಮಾತಾಡಲೂ ಬಂದು ಕೂತರೆ ಅಷ್ಟೊತ್ತಿನವರೆಗೆ ಅಲ್ಲಿ ಮೌನ ತಾಂಡವಾಡುತ್ತಿದ್ದು ಒಮ್ಮೆಲೆ‌ ಅದು ಕೂಡ ಇವರ ಮಾತಿನ ಗಲಿಬಿಲಿಯನ್ನು ತಾಳಲಾರದೆ ಕಿವಿ ಮುಚ್ಚಿಕೊಳ್ಳುತ್ತದೆ.

ಹಿತ್ತಲಿನ ತುಂಬೆಲ್ಲ ಹಾರಾಡುತ್ತಿರುವ ಅಮ್ಮನ, ಅಕ್ಕನ ತಲೆಗೂದಲು, ಮೂಲೆಯಲ್ಲಿ ಸಣ್ಣ ಗುಡ್ಡದ ಹಾಗೇ ಒತ್ತೊತ್ತಾಗಿಟ್ಟಿರುವ ಕಟ್ಟಿಗೆ ತುಂಡು, ಹಿತ್ತಲ ಗಿಡವು ಮದ್ದಲ್ಲ ಎಂಬ ಗಾದೆಯೊಂದು ಅಸ್ತಿತ್ವದಲ್ಲಿದ್ದರೂ, ಈ ಪಕ್ಕದ ಮೂಲೆಯಲ್ಲಿ ಬೆಳೆದಿರುವ ಸೊಪ್ಪು, ಹೂವು, ತರಕಾರಿ ಗಿಡಗಳು. ಅಣ್ಣನ ಸಿಗರೇಟು ಸೇದುವ ತಂಗುದಾಣವಿದು. ತಮ್ಮ ಮನೆಗೆ ಲೇಟಾಗಿ ಬಂದರೆ ಮನೆ ಒಳಗೆ ಸೇರುವಂತಹ ಕಳ್ಳದಾರಿ. ಹೀಗೆ ಹಿತ್ತಲು ಎಂಬುದು ಕೇವಲ ಖಾಲಿ ಜಾಗವಲ್ಲ. ಅಲ್ಲಿ ಹಲವಾರು ಭಾವಗಳಿವೆ.

ಅಕ್ಕ ಕದ್ದು ಮುಚ್ಚಿ ತನ್ನ ಪ್ರಿಯಕರನೊಂದಿಗೆ ಮಾತನಾಡುವ ಜಾಗ. ಬೇವಿನ ಮರದ ಕೆಳಗೆ ಮೈಮರೆತು ಪತ್ರ ಬರೆಯುವಾಗ ಗೊತ್ತಾಗದೆ ನನ್ನ ಕೈಗೆ ಸಿಕ್ಕಿಕೊಂಡಾಗ ಅವಳನ್ನು ಕಾಡುವಂತಹದು, ಗೋಗೆರಯುವುದು ಇಲ್ಲಿಯೇ.

ಸೂರ್ಯ ಮುಂಜಾನೆ ರಾತ್ರಿಯ ತಣ್ಣನೆಯ ನಿದ್ದೆಯನ್ನು ಮುಗಿಸಿ ಎಚ್ಚೆತ್ತು ನಿಧಾನಕ್ಕೆ‌ ಮೈಮುರಿದಂತೆ ಮನೆಯ ಅಂಗಳದೊಂದಿಗೆ‌ ಹಿತ್ತಲೂ ಕೂಡ ನಿಧಾನಕ್ಕೆ ಅರಳುತ್ತದೆ. ಅಮ್ಮನು ಅಲ್ಲೇ‌ ಹಿಂಬಾಗಿಲ ಮೂಲೆಯಲ್ಲಿ ಇಟ್ಟಿರುವ ಪಾತ್ರೆಗಳನ್ನು ಉಳಿದ ಮನೆಯ ಮಂದಿಗೆ ಬೈಯುತ್ತಾ ಪಾತ್ರೆ ತೊಳೆಯುತ್ತಿದ್ದರೆ, ಎಲ್ಲರಿಗೂ ಅದೊಂದು ಸುಪ್ರಭಾತವಿದ್ದ ಹಾಗೇ. ಅಡುಗೆಯ ಹೆಚ್ಚಾದ ನೀರು ಪಟ್ಟನೆ ಅಡುಗೆಮನೆಯಿಂದ ನೇರವಾಗಿ ಸಿಡಿಯುವುದು ಇದೇ ಹಿತ್ತಲಿಗೆ.

ಮನೆಯ ಗಂಡಸರಿಗೂ ಯಾರ ಗಮನಕ್ಕೂ ಬಾರದ
ಹವ್ಯಾಸಗಳು ‌ಬಿಡುವಿದ್ದಾಗ ಪ್ರಕಟಗೊಳ್ಳುವುದು ಇಲ್ಲಿಯೇ. ಹಾಡೊಂದು ಆಲಾಪವಾಗಿ ಗುನುಗುನಿಸುತ್ತಿರುತ್ತದೆ. ಅಕ್ಕನ‌ ಚಿತ್ತಾರವೆನಿದ್ದರು ಮಣ್ಣಿನ ಕಲ್ಲಿನಲ್ಲಿ ಮಾತ್ರ. ಇದನ್ನು ಹಿತ್ತಲು ಮಾತ್ರ ಗಮನಿಸುತ್ತದೆ ಅವರ ಅರಿವಿಗೂ ಬಾರದಂತೆ..

ಹಿತ್ತಲಿನ ಉಪಯೋಗ, ಮಹತ್ವ ಎಲ್ಲರಿಗೂ ಹೆಚ್ಚಿಗೆ ಗಮನಕ್ಕೆ ಬರುವುದು ಸದ್ದಿಲ್ಲದೆ ಮಳಯೊಂದು ಟಿಸಿಲೊಡೆದು ಭೂಮಿಗೆ ರಪ್ಪೆಂದು ರಚ್ಚೆ ಹಿಡಿದ ಮಗುವಿನಂತೆ ಅಪ್ಪಳಿಸಿದಾಗ. ಮೂಲೆಯಲ್ಲಿ ಒತ್ತೊತ್ತಾಗೆ ಒಟ್ಟಿರುವ ಕಟ್ಟಿಗೆಯ ಗುಂಪಿಗೆ ಬೇಸಿಗೆಯಲ್ಲಿಯೆ ಅದನ್ನು ಬೆಚ್ಚಗೆ ಮಳೆಗಾಲ, ಚಳಿಗಾಲದವರೆಗೂ ಹೇಗೆ ಕಾದಿರುಸುವುದು ಎಂಬ ಉಪಾಯ ಸಣ್ಣಗೆ ಜಾರಿಯಾಗತೊಡಗಿರುತ್ತದೆ. ಮಳೆಗಾಲಕ್ಕೆ ಎಲ್ಲವನ್ನೂ ಬೆಚ್ಚಗೆ ಕಾಪಿಟುಕೊಳ್ಳುವ ಹೆಚ್ಚಿನ ಜವಾಬ್ದಾರಿಯ ಹೊಣೆಯೊಂದು ಹಿತ್ತಲಿನ ಮೇಲೆ‌ ಸಣ್ಣಗೆ ಆಜ್ಞಾಪೂರ್ವಕವಾಗಿ ಜಾರಿಯಾಗುತ್ತೆ.

ಶಿಶಿರ ಋತುವೊಂದು ಮೆಲ್ಲ ಮೆಲ್ಲನೆ ಹೆಜ್ಜೆ ಇಟ್ಟೊಡನೆ, ಹಿತ್ತಲಿನ ಇಕ್ಕಟ್ಟಿನ ಜಾಗದ ನಡುವೆಯೆ ಅಲ್ಲಿಯೆ ಬೆಳೆದಿದ್ದ ಮರಗಳ ರೆಂಬೆ ಕೊಂಬೆಗಳು, ಪುರಗಲೆಗಳು ಹೀಗೆ ಚಳಿಗೆ ಬೆಚ್ಚನೆಯ ಬೆಂಕಿ ಕಾಯಿಸಿಕೊಳ್ಳಲು ಉರಿಗೆ ಆಹುತಿಯಾಗುತ್ತವೆ‌. ಒಮ್ಮೊಮ್ಮೆ ಅದೃಷ್ಟವಿದ್ದಲ್ಲಿ ಹಿತ್ತಲಿನ ನಡುವಲ್ಲಿಯೆ ಬೆಳದಿಂಗಳ ಊಟದ ಸವಿಯನ್ನು ಸವಿಯಬಹುದು. ಆಗ ಊಟವೂ ಕೂಡ ಮತ್ತಷ್ಟು ರುಚಿಯಾಗಿರುತ್ತದೆ. ಊಟದ ಪ್ರೀತಿಯೊಂದಿಗೆ ಎಲ್ಲರ ಒಗ್ಗಟ್ಟಿನ ಬಲವೊಂದು ಅಪರಿಮಿತವಾಗಿ ಅದರೊಂದಿಗೆ ಮಿಳಿತವಾಗಿರುತ್ತದೆ.

ಹೊಲದ ಸುಗ್ಗಿಯಲ್ಲಿ ಒಮ್ಮೊಮ್ಮೆ ಕಣವನ್ನೆಲ್ಲ ಹಿತ್ತಲಲ್ಲಿಯೆ ರಾಶಿ ಮಾಡುವಾಗ ರಾತ್ರಿಯೆಲ್ಲ‌ ಕಣ್ಣುಗಳಿಗೆ ಕಥೆ ಹೇಳುತ್ತಾ, ಜಾಗರಣೆ ಮಾಡಿಸುತ್ತಾ ಹಿತ್ತಲಿಗೆ ಪಹರೆ ಹಾಕುವ ಕೆಲಸವೊಂದು ಮನೆಯ ಗಂಡುಮಕ್ಕಳಿಗೆ ಕಾದು ಕುಳಿತಿರುತ್ತದೆ. ಹಿತ್ತಲಿನ ಆ ಕಡೆಯ ಮೂಲೆಯಲ್ಲಿ ಬಣವೆ(ಮೇವಿನ ದೊಡ್ಡ ಹೊರೆ) ಯನ್ನು ಒಟ್ಟುವುದು ಒಂದು ಸಂಭ್ರಮದ ಹಬ್ಬವಾಗಿರುತ್ತದೆ. ದನ-ಕರುಗಳಿಗೆಲ್ಲ ಒಟ್ಟಿಗೆ ಮೇವಿನ ರಾಶಿಯನ್ನು ಹಾಕುವುದು. ಅವುಗಳೆಲ್ಲ ಸಂಭ್ರಮದಿಂದ ಕೀರಲು ಹಾಕುತ್ತಿರುತ್ತವೆ.

ಮನೆ ಆಚೆಗೆ ಹೋಗಲು ಬಿಡದ ಬಸುರಿಯರಿಗೆಲ್ಲ ಹಿತ್ತಲೆ‌ ಒಂದು ಪ್ರಪಚವಿದ್ದಂತೆ. ಹಿತ್ತಲಿನ ಬಟ್ಟೆಯನ್ನು ಒಗೆಯುವ ಕಟ್ಟೆಯ ಮೇಲೆ ಕೂಸನ್ನು ಅಜ್ಜಿಯು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಅದರ ಮೈಯನ್ನು ಹದವಾಗಿ ನೀವಿ ಸ್ನಾನ‌ ಮಾಡಿಸುತ್ತಿದ್ದರೆ, ಅದರ ಮೈಯ ಪರಿಮಳವೊಂದು ಗಂಧದಂತೆ ಸುತ್ತಲೂ ಆಘ್ರಾಣಿಸುತ್ತದೆ. ಮತ್ತೊಮ್ಮೆ ಆ ಕ್ಷಣದಲ್ಲಿ ಅಲ್ಲಿದ್ದ ಎಲ್ಲರಿಗೂ ಮಗುವಾಗಬೇಕೆಂದ ಭಾವ ಒಮ್ಮೆಲೆ ಅಡಿಯಿಡುತ್ತದೆ.

ಹಿತ್ತಲೂ ಹೀಗೆ ಇದ್ದೂ ಇಲ್ಲದಂತೆ ತನ್ನ ಅಸ್ತಿತ್ವವನ್ನೂ ಎಲ್ಲರಿಗೂ ತೋರುತ್ತದೆ. ಒಮ್ಮೊಮ್ಮೆ ಹಿತ್ತಲಿನಲ್ಲಿ ಊರಿನ ಜನರಿಗೆ ತಿಳಿಯಂದತಹ ಕೆಲವೊಂದು ಮುಚ್ಚಿಡಬೇಕಾದ ಸತ್ಯಗಳು ಹಿತ್ತಲಿನಲ್ಲಿಯೆ ಸಮಾಧಿಯಾಗುತ್ತವೆ.ಒಂದೊಂದು ವಸ್ತು, ಸ್ಥಳಗಳ ಉಪಯೋಗ ಒಮ್ಮೆಲೆ ಅರಿವಿಗೆ ಬಾರದಿದ್ದರು ನಿಧಾನಕ್ಕೆ ಅವುಗಳ ಸಹಚರ್ಯವಿಲ್ಲದೆ ಬದುಕು ಕಷ್ಟವಾಗುತ್ತದೆ. ಹಿತ್ತಲೆಂಬುದು ಹಾಗೇಯೆ, ಹಿತ್ತಲು ಯಾಕೆ ಬೇಕು ಎಂದರೂ, ಅದು ಅನಿವಾರ್ಯ ಸಂಗತಿ, ಅಗತ್ಯತೆಯೂ ಹೌದು. ಅಲ್ಲಿ ಕಾಡುವ ದನಿಯಿದೆ. ಸಂಜೆಯಷ್ಟೇ‌ ಅರಳಿ ಮರೆಯಾದ ಪಾರಿಜಾತದ ಹೂವಿನ ಘಮವಿದೆ. ಅವ್ವನ ಏರು ಬೈಗುಳವಿದೆ. ಅಪ್ಪನ ಬೆವರು ಎಲ್ಲೆಡೆಯೂ ಪಸರಿಸಿದೆ. ಅಕ್ಕನ ನಾಚಿಕೆಯಿದೆ. ಅಣ್ಣನ ಕಾಳಜಿಯಿದೆ. ಹೀಗೆ ಹಿತ್ತಲಿನಲ್ಲಿ ಎಲ್ಲವೂ ಅಡಗಿದೆ. ಹೀಗೆ ಹಿತ್ತಲೂ ಸಂಜೆಯ ನಸುಗಂಪಲ್ಲಿ ಕಾಡುವ  ಸೂರ್ಯನಂತೆ. ಹೀಗೆ ಹಿತ್ತಲೆಂಬುದು ಕೇವಲ‌ ಮನೆಗೆ ಹಚ್ಚಿದಂತಿರುವ ಗಿಡ-ಮರಗಳ ಜಾಗ ಮಾತ್ರವಲ್ಲ, ಅದೊಂದು ಅನೇಕ ಭಾವಗಳ ಸಮ್ಮಿಶ್ರಣ.

- ರಾಜೇಶ್ವರಿ ಲಕ್ಕಣ್ಣವರ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಡಿಗ್ರಿ ಮುಗಿತು ಮುಂದೇನು?