ಕೆನ್ನೆ ಮೇಲೆ ಇಳಿಯುತ್ತಿದ್ದ ಕಣ್ಣೀರಿನ ಹೊರತಾಗಿ...!!

ಕೆನ್ನೆ ಮೇಲೆ ಇಳಿಯುತ್ತಿದ್ದ ಕಣ್ಣೀರಿನ ಹೊರತಾಗಿ...!!

ಈ  ಬದುಕೆಂಬ ಪಯಣದಲ್ಲಿ ಅನಿರೀಕ್ಷಿತವಾಗಿ ಬರುವ ತಿರುವಗಳೆಷ್ಟೋ? ನಿಲ್ದಾಣಗಳೆಷ್ಟೋ? ನಡುವೆ ಬಂದು ಹೋಗುವ ಸಂಬಂಧಗಳೆಷ್ಟೋ? ಉಳಿಯುವ ಬಂಧಗಳೆಷ್ಟೋ? ಈ ಪಯಣದಲ್ಲಿ ಅತಿಯಾಗಿ ಹಚ್ಚಿಕೊಂಡವರನ್ನು ಕಳೆದುಕೊಂಡಾಗ, ಈ ಜಗತ್ತೇ ನಮಗೆ ಬೇಡ ಎಂದೆನಿಸಿಬಿಡುತ್ತದೆ. ಅವರು ನಮಗೆ ಅಷ್ಟೊಂದು ಆತ್ಮೀಯರಾಗಿರುತ್ತಾರೆ. ನನ್ನ ಬದುಕಿನ ಅಂತಹ  ಆತ್ಮೀಯರಲ್ಲಿ ಒಬ್ಬರು ನನ್ನಜ್ಜ.

ನನ್ನಜ್ಜ ಯಾರಿಗೂ ತಾನು ಹೊರಡುವ ಸುಳಿವನ್ನು ನೀಡದೆ, ಭಗವಂತನ ದಾರಿಯತ್ತ ಹೆಜ್ಜೆ ಹಾಕಿದ್ದಾನೆ. ನಾನು ಊರಿಗೆ ಹೋಗುವ ಹಿಂದಿನ ದಿನವಷ್ಟೆ ಫೋನ್‍ನಲ್ಲಿ ಅಜ್ಜನ ಜೊತೆ ಹರಟೆ ಹೊಡೆದಿದ್ದ ನನಗೆ, ಇನ್ನೂ ಅಜ್ಜನೊಂದಿಗೆ ಮಾತನಾಡಲು ಆಗುವುದಿಲ್ಲ ಎಂಬ ಸತ್ಯವನ್ನು ಅರಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ನೀನಿಲ್ಲದ ಮನೆ ಬಿಕೋ ಎನ್ನಿಸುತ್ತಿದೆ. ನೀನು ಕುಳಿತುಕೊಳ್ಳುತ್ತಿದ್ದ ಕುರ್ಚಿ ಖಾಲಿಯಾಗೇ ಉಳಿದಿದೆ. ನೀನು ಬಿಡಿಸುತ್ತಿದ್ದ ಪದಬಂಧದ ಅಕ್ಷರಗಳು ಸಹ ಮೌನವಾಗಿ ರೋಧಿಸುತ್ತಿವೆ. ನಾನು ಊರಿಗೆ ಬಂದಾಗಲೆಲ್ಲ, ಸಪ್ಪೆ ಅಡುಗೆ ತಿಂದು ಸಾಕಾಗಿದೆ, ಏನಾದರೂ ಸ್ಪೆಶಲ್ ಮಾಡಿಕೊಡು ಎಂದು ಹೇಳುತ್ತಿದ್ದ ಮಾತು ಕಿವಿಯಲ್ಲಿಯೇ ಗುಂಯಗುಡುತ್ತಿದೆ.

ಜನ ಸತ್ತ ಮೇಲೆ ಎಲ್ಲಿಗೊಗ್ತಾರೆ? ಎಂದು ಸಣ್ಣವಳಿದ್ದಾಗ ನಾನು ಕೇಳಿದ ಮುಗ್ದ ಪ್ರಶ್ನೆಗೆ, ನೀನು ಅವರೆಲ್ಲ ನಕ್ಷತ್ರಗಳಾಗಿ ಹೊಳಿತಾರೇ ಎಂದು ಉತ್ತರ ನೀಡಿದ್ದೆ. ನನಗೊತ್ತು, ನೀನು ಈವಾಗ ನಕ್ಷತ್ರ ಆಗಿದ್ದೀಯಾ ಅಂತ, ಈಗ ತಾನೇ ಆಗಸವನ್ನು ನೋಡಿಕೊಂಡು ಬಂದೆ, ಅದೋ ಮೋಡದಲ್ಲಿ ಅವಿತುಕೊಂಡು ಹೊಳಿಯುತ್ತಿದ್ದು ನೀನೆ ತಾನೇ...!!

ಆದರೆ ಕೊನೆಗಾಲದಲ್ಲಿ ನಿನ್ನ ಮುಖವನ್ನು ನೋಡಲು ಸಹ ಆಗದಷ್ಟು ನತದೃಷ್ಟೆಯಾಗಿದ್ದೆ ಅನ್ಸುತ್ತೆ ನಾನು.. ನಾ ಸ್ಪರ್ಧೆಗಳಿಗೆಂದು ಸ್ನೇಹಿತರ ಜೊತೆ ಬೇರೆ ಊರಿನ ದಾರಿಯಲ್ಲಿದ್ದರೆ, ನೀನು ನಿನ್ನ ಪಯಣದ ಅಂತಿಮ ದಾರಿಯಲ್ಲಿ ಎಲ್ಲರನ್ನೂ ಬಿಟ್ಟು ಹೊರಡುವ ಸಿದ್ಧತೆಯನ್ನು ನಡೆಸಿದ್ದೆ. ಯಾಕ ನನಗ ಹೇಳಿಲ್ಲ ನೀನು... ಇಷ್ಟು ಬೇಗ ಹೊರಟು ಹೋಗ್ತೀ ಅಂತ..? ಬಹುಮಾನ ಬಂದ ಸಂತಸವನ್ನು ನಿನ್ನ ಹತ್ರ ಹಂಚಿಕೊಳ್ಳೊಕೆ ಅಂತ ಓಡಿ ಬರ್ತಾ ಇದ್ದವಳಿಗೆ, ನೀನು ಇನ್ನಿಲ್ಲ ಅನ್ನೋ ಉತ್ತರ.. ಅತ್ತೆ, ನನ್ನ ಹತ್ರ ಯಾಕ ವಿಷ್ಯ ಮುಚ್ಚಿಟ್ರೀ ಅಂತ ಜಗಳ ಮಾಡಿದೆ, ಆದ್ರೆನೂ ಮಾಡುವುದು ನೀನಾಗ್ಲೆ ಆಕಾಶದಲ್ಲಿ ಹೊಳಿತಾ ಇದ್ದೇ.

ಇನ್ನೂ ನನ್ನ ಬದುಕಿನ ಪುಟದಲ್ಲಿ ನೀನಿನ್ನೂ ನೆನಪು ಮಾತ್ರ. ಕೊನೆಗೆ ನಿನಗೆ ಕೊಡೊಕೇ ಉಳಿದದ್ದು ಮತ್ತೇನಿರಲಿಲ್ಲ, ಕೆನ್ನೆ ಮೇಲೆ ಇಳಿಯುತ್ತಿದ್ದ ಕಣ್ಣೀರಿನ ಹೊರತಾಗಿ...!!

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಅಪ್ಪಟ ಧಾರವಾಡ ನೆಲದ ಕಾದಂಬರಿ