ನನ್ನ ಪ್ರೀತಿಯ ಹುಡುಗಿಗೆ

ನನ್ನ ಪ್ರೀತಿಯ ಹುಡುಗಿಗೆ,

ಊರಿಗೆ ಬಂದು ಎಷ್ಟೋ ದಿನಗಳೆ ಆಗಿದ್ದವು, ಊರಿಗೆ ಬಾರೋ ಎಂದು ಫೊನ್ ಮಾಡಿದಾಗೊಮ್ಮೆ ಅಮ್ಮ ಹೇಳುತ್ತಿದ್ದಳು ಸರಿ ಎಂದು ಪ್ಯಾಕ್ ಮಾಡಿಕೊಂಡು ಊರಿಗೆ ಬಂದೆ ಬಿಟ್ಟೆ.

ನಿನ್ನ ಮದುವೆ ದಿನವೆ ಕೊನೆ ಮತ್ತೆ ಊರಿಗೆ ಹೋಗಿರಲೆ ಇಲ್ಲ. ಯಾಕೋ ಇವತ್ತು ನಿನ್ನ ನೆನಪು ತುಂಬಾ ಕಾಡ್ತಿದೆ ನಿನಗೆ ನನ್ನ ನೆನಪು ಕೂಡ ಇದೆಯೋ ಇಲ್ವೊ ಗೊತ್ತಿಲ್ಲ ಇರಬೇಕು ನೀನು ಗಂಡನೊಂದಿಗೆ ಆರಾಮಾಗಿ ಅನ್ಸುತ್ತೆ ನಿನಗೇನು ಗೊತ್ತು ನಾನಿಲ್ಲಿ ದಿನವೂ ನಿನ್ನ ನೆನಹುವಿನಲ್ಲಿ ಬೇಯುತ್ತಿರುವುದು.

ನಿನ್ನದು ತಪ್ಪಿಲ್ಲ ಅನ್ಸುತ್ತೆ ನಮ್ಮ ನಡುವೆ ಅಡ್ಡವಾಗಿದ್ದು ಈ ಜಾತಿಯೆಂಬ ವಿಷಗೋಡೆ. ಕಡೆವರೆಗೂ ಜೊತೆಲಿರುವೆ ಎಂದು ಆಣೆ ಮಾಡಿ ನಡುವೆ ನನ್ನ ಬಿಟ್ಟು ಹೋಗುವೆಯೆಂದು ನಾನು ಕನಸಲ್ಲಿಯೂ ಕೂಡ ಊಹಿಸಿರಲಿಲ್ಲ.

ಅವತ್ತು ಒಂದೇ ಒಂದು ಮಾತು ನಡೀ ಎಲ್ಲಾದರೂ ಹೋಗೋಣ ಬಾ ಜೊತೆಯಲಿ ಇರೋಣ ಎಂದು ಒಂದೇ ಒಂದು ಮಾತಿಗೋಸ್ಕರ ಕಾಯುತ್ತಿದ್ದೆ ಆದರೆ ನೀನು ಮಹಾ ಮೊಂಡು ಹೇಳಲೆ ಇಲ್ಲ ಹಾಗೆ ನನ್ನ ಮರೆತ ಬಿಡು ಎಂದು ಎಷ್ಟು ಸುಲಭವಾಗಿ ಹೇಳಿ ಹೋದೆ.

ನಿನಗೊತ್ತಾ ಅವತ್ತಿಂದ ಕಣ್ಣಿಗೆ ನಿದ್ದೆ ಇಲ್ಲ ಕಣ್ಮುಚ್ಚಿದರೂ ತೆರೆದರು ನಿನ್ನ ನೆನೆಪೆ ನನ್ನ ಕಾಡುತ್ತಿತ್ತು. ಅದೆಷ್ಟು ಸುಲಭವಾಗಿ ನೀನು ನನ್ನ ಮರೆತು ಇನ್ನೊಬ್ಬನೊಂದಿಗೆ ಸಪ್ತಪದಿ ತುಳಿದು ಬಿಟ್ಟೆ ಅಲ್ಲ, ನಾನು ಕೂಡ ಬಂದಿದ್ದೆ ನಿನ್ನ ಮದ್ವೆಗೆ ಆದರೆ ನೀನು ನನ್ನೆಡೆಗರ ತಿರುಗಿಯೂ ನೋಡಲಿಲ್ಲ. ಕೈಯಲ್ಲಿದ್ದ ಅಕ್ಷತೆಯನ್ನೂ ಅಲ್ಲಿಯೆ ಚೆಲ್ಲಿ ಅವತ್ತೆ ಊರನ್ನು ಬಿಟ್ಟೆ ತಂದೆ ತಾಯಿಗಳ ಮಾತನ್ನು ಕೇಳದೆ.

ಬದುಕನ್ನು ಹುಡುಕುತ್ತಾ ಬೇರೆ ಊರಿಗ ಬಂದೆ ಕೈಯಲ್ಲಿ ಡಿಗ್ರಿ ಇತ್ತು ಕೆಲಸದ ಅನಿವಾರ್ಯತೆ ಇತ್ತು ಕೆಲಸ ಮಾಡ್ಲೆಬೇಕಿತ್ತು, ಯಾವುದಾದರೂ ಸರಿ ಎಂದೂ ಎಲ್ಲ ಕೆಲಸಕ್ಕೂ ಸಿದ್ದವಾಗಿಯೇ ನಿಂತಿದ್ದೆ. ಒಂದು ಒಳ್ಳೆಯ ಕಂಪನಿಯಲ್ಲಿ ಕೆಲಸವೆನೂ ಸಿಕ್ಕಿತು‌. ಆದರೆ ನಾನು ಬದುಕಿದ್ದು ಸತ್ತ ಹಾಗಿಯೇ ಇದ್ದೆ. ಕೆಲಸಕ್ಕೆ ಹೋಗುತ್ತಿದ್ದೆ ಬರುತ್ತಿದ್ದೆ ಯಾರೊಂದಿಗೂ ಮಾತಿಲ್ಲ ಕತೆಯಿಲ್ಲ ನಾನಾಯಿತು ನನ್ನ ಕೆಲಸವಾಯಿತು, ಬದುಕಲೇ ಬೇಕಲ್ಲ ಎಂದು ಊಟವನ್ನು ಮಾಡುತ್ತಿದ್ದೆ ಇದಿಷ್ಟೇ ನನ್ನ ಬದುಕಾಗಿತ್ತು.

ನೀನು ಯಾವಾಗಲೂ ಹೇಳುತ್ತಿದ್ದೆ ನೀನು ಎಷ್ಟು ಬೇಗ ಎಲ್ಲರನ್ನೂ ಹೇಗೆ ಹಚ್ಚಿಕೊಳ್ತಿಯಾ, ನೀನು ಜನರ ನಡುವೆ ಇದ್ದರೆ ಸಾಕು ಎಲ್ಲರನ್ನೂ ನಗಿಸ್ತಾ ನಗ್ತಾ ಇರ್ತಿಯಾ ಸದಾ ವಟಗುಡುವ ಮಾತುಗಾರ ಎಂದು ಯಾವಾಗಲೂ ಆಡಿಕೊಳ್ತಿದ್ದೆ ಅಲ್ವಾ ನೋಡು ಈಗ ಒಬ್ಬರೊಂದಿಗೂ ಮಾತಿಲ್ಲ ಕತೆಯಿಲ್ಲ. ನನ್ನೊಳೊಗೆ ಮತ್ತಷ್ಟು ಕುಗ್ಗಿ ಹೋಗಿದ್ದೆನೆ.

ಅಮ್ಮ ಕೆಲಸ ಸಿಕ್ತು ವಯಸ್ಸಾಯ್ತು ಇನ್ನೂ ಯಾವಾಗಲೊ ಮದುವೆ ಆಗ್ತಿಯಾ ನೀನು ಹೆಣ್ಣು ನೋಡೋಣ ಅಂತಿದಾರೆ, ನಾ ಹೇಗೆ ಒಪ್ಪಿಗೆ ಕೋಡೋಕೆ ಸಾಧ್ತ ಮನಸ್ಸೊಳಗೆ ನಿನ್ನನ್ನು ಅವಿತಿಸಿಕೊಂಡಿರುವ ನನಗೆ.

ನಿನಗೆ ನೆನಪಿದೆಯಾ ನಾವು ಮಾತಾಡುತ್ತಿದ್ದ ಜಾಗಗಳು, ಊರ ಕೆರೆಯ ದಂಡೆ, ಸೀನಜ್ಜನ ಮಾವಿನ ತೋಪು, ಊರ ಹೊರಗಿನ ಬಯಲು, ಬೆಟ್ಟ ಎಲ್ಲ ಕಡೆಯೂ ಇವತ್ತು ಅದನ್ನು ನೋಡೋಕೆ ಅಂತ ಹೋಗಿದ್ದೆ, ಊರ ಕೆರೆಯಲ್ಲಿ ನೀರೆ ಇಲ್ಲ ಮೂರು ವರ್ಷದಿಂದ ಮಳೆಯೆ ಆಗಿಲ್ಲ ಎಂದು ಅಮ್ಮ ಹೇಳಿದಳು. ಅಲ್ಲಿ ಎಷ್ಟು ಖುಷಿ ನಿನಗೆ ನೀರೊಳೊಗೆ ಆಟವಾಡೊಕೆ ಯಾವಾಗಲೂ ಅದಕ್ಕೆ ನಾನು ನಿನಗೆ ಸಣ್ಣ ಪಾಪು ಎಂದು ರೇಗಿಸುತ್ತಿದ್ದೆ ಅದ್ಕೆ ನೀನು ನಾನು ಪಾಪು ಅಲ್ಲ ದೊಡ್ಡ ಹುಡ್ಗಿ ಎನ್ನುತ್ತಿದ್ದೆ, ಆ ನಿನ್ನ ಕಂಗಳ ಹುಸಿ ಮುನಿಸನ್ನು ನೋಡಬೇಕಂತಲೆ ನಿನ್ನನ್ನು ರೇಗಿಸುತ್ತಿದ್ದಿದ್ದು ನಿನಗೆ ಕಡೆಗೂ ಗೊತ್ತಾಗಲೆ ಇಲ್ಲ ನೋಡು, ಎಲ್ಲವೂ ಬದಲಾಗಿದೆ ಸೀನಜ್ಜನ ತೋಟದಲ್ಲಿ ಈಗ ಹಣ್ಣುಗಳೆ ಇಲ್ಲ, ಇನಯ ನನಗೆ ಇದನ್ನಯ ನೋಡಿಕೊಳ್ಳಲು ಆಗುವುದಿಲ್ಲ ಇದನ್ನು ಮಾರಿಬಿಟ್ಟು ಎಲ್ಲಾದ್ರೂ ಹೋಗ್ತಿನಿ ಎಂದು ಹೇಳ್ತಿದ್ದ.

ಹುಡ್ಗಿರೆಂದರೆ ಮಾರು ದೂರ ಓಡುತ್ತಿದ್ದ ನನಗೆ ಮೊದಲ ಬಾರಿ ನನ್ನೊಳಗೆ ಪ್ರೀತಿಯ ಬೀಜವನ್ಯ ನೆಟ್ಟು ಅದನ್ನು ಚಿಗುರಿಸಿದವಳು ನೀನು. ಅವತ್ತು ಊರ ಜಾತ್ರೆ ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತ ನಿಂತಿದ್ದ ನನಗೆ ನೀನು ಕಣ್ಣೆದರು ಪಾಸಾದೆ. ಒಂದು ಕ್ಷಣ ನನ್ನೊಳೆಗೆ ನಾನು ಕಳೆದು ಹೋದೆ, ಹಸಿರು ಬಣ್ಣದ ಲಂಗ ದಾವಣಿಯಲ್ಲಿ ನೀನು ಮತ್ತಷ್ಟು ಮುದ್ದಾಗಿ ಕಾಣುತ್ತಿದ್ದೆ ನೀನು ಕಿವಿಯಲ್ಲಿ ಮುತ್ತಿನ ಜುಮುಕಿ, ಹೆರಳಲ್ಲಿ ದುಂಡುಮೊಲ್ಲೆಯ ಹೂವು ಎಷ್ಟು ಚೆನ್ನಾಗಿ ಕಾಣುತ್ತಿದ್ದೆ, ಯಾರೆಡಗೂ ತಿರುಗಿ ನೋಡದ ನಾನು ಅದೆಷ್ಟು ಸುಲಭವಾಗಿ ಆ ನಿನ್ನ ಕಣ್ಣಂಚಿನ ಕಾಡಿಗೆಗೆ ಮೋಸ ಹೋಗಿ ನಿನಗೆ ಸೆರೆಯಾದೆ.

ನೀನೋ ಊರ ಗೌಡರ ಮಗಳು ನಾನು ಮಧ್ಯಮ ವರ್ಗದ ಮಾಸ್ತರ್ ಮಗ ನಮ್ಮಪ್ಪ ತರುತ್ತಿದ್ದ ಸಂಬಳ ನಮ್ಮ ಹೊಟ್ಟೆಗೆ ಬಟ್ಟೆಗೆ ಸಾಲುತ್ತಿತ್ತು. ಆದರೆ ಪ್ರೀತಿಗೆ ಜಾತಿ ಅಂತಸ್ತು ಯಾವುದು ಇಲ್ಲ ಎಂದು ನಂಬಿದ ನಾನು ಅದೇ ಕ್ಷಣದಿಂದಲೇ ನಿನ್ನನ್ನು ಪ್ರೀತಿಸತೊಡಗಿದೆ.

ಆದರೆ ನನ್ನ ಒಪ್ಪಿಕೊಳ್ಳಲು ಅದೆಷ್ಟು ಸತಾಯಿಸಿದೆ ನೀನು, ಆ ನಿನ್ನ ಮೊಂಡು ಕೋಪ, ಹಠಮಾರಿತನ ನಿನ್ನನ್ನು ಮತ್ತಷ್ಟು ಇಷ್ಟ ಪಡುವ ಹಾಗೆ ಮಾಡಿತು ಕಣೇ ಹುಡುಗಿ.

ಕಡೆಗೂ ಒಂದು ದಿನ ನೀನು ನನ್ನನ್ನು ಒಪ್ಪಿಕೊಂಡೆ ನಾನು ನಿನ್ನನ್ನು ಪ್ರೀತಿಸ್ತಿನಿ ಕಣೋ ಹುಡುಗಾ ಎಂದು ಹೇಳಿ ನಾಚುತ್ತಾ ಓಡಿ ಹೋದಾಗ ಸ್ವರ್ಗದಲ್ಲಿ ಇದೆನೊ ಎನ್ನುವಂತೆ ಖುಷಿಯಿಂದ ಕುಣಿದಾಡಿದ್ದೆ. ಅವತ್ತು ಒಂದು ತುತ್ತು ಹೆಚ್ಚಿಗೆಯೆ ಊಟವನ್ನು ಮಾಡಿದ್ದೆ.

ಮಾರನೇ ದಿನದಿಂದ ಸೀನಜ್ಜನ ಮಾವಿನ ತೋಪು, ಬೆಟ್ಟದ ಮೇಲೆ, ಊರ ಕೆರೆಯ ದಂಡೆ ಹೀಗೆ ಅಲ್ಲಲ್ಲಿ ಸಿಗುತ್ತಿದ್ದೆವು, ಪ್ರತಿ ಬಾರಿ ಭೇಟಿಯಾದಗಲು ನಾನು ಕೇಳುತ್ತಿದ್ದಿದ್ದು ಒಂದೇ ಮಾತು ನಾನವಿಬ್ಬರೂ ಯಾವಾಗಲೂ ಹೀಗೆ ಇರುತ್ತೆವೆಯಲ್ಲ ಎಂದು. ಅದೆಷ್ಟು ಚೆಂದವಾಗಿ ಹೇಳುತ್ತಿದ್ದೆ ಕಡೆವರೆಗೂ ಹೀಗೆ ಇರುತ್ತೆವೆ ಎಂದು. ಆ ಮಾತನ್ನು ಅದೆಷ್ಟು ಬೇಗ ಸುಳ್ಳು ಮಾಡಿ ನನ್ನ ಮರೆತು ಬಿಡು ಎಂದು ಹೇಳಿ ಹೋದೆಯಲ್ಲ, ಬೇಗ ಕೆಲಸ ತಗೋ ಮನೆಯಲ್ಲಿ ಹೇಳೋಕೆ ಒಂದು ದಾರಿಯಾಗುತ್ತೆ ಅಂತಿದ್ದೆ. ನಾನು ಅದನ್ನು ಅಷ್ಟು ಸಿರಿಯಸ್ ಆಗಿ ತೆಗೆದುಕೊಳ್ಳಲೆ ಇಲ್ಲ ಹುಡುಗಿ, ಅದರ ಪಶ್ಚಾತಾಪ ಈಗ ನನ್ನ ಕಾಡುತ್ತಿದೆ.

ಹಾಗೇ ಹೇಳಿದ ಒಂದು ವಾರಕ್ಕೆ ನಿನ್ನ ಮದುವೆ ಮತ್ತೊಂದು ಆಘಾತ ನೀನು ಮದುವೆಗೆ ಬರಬೇಡ ಎಂದರೂ ನಾನು ಬಂದಿದ್ದೆ ಅಲ್ಲಿ ಇರಲಾಗದೆ ಹೊರಟು ಬಂದಿದ್ದೆ ಅವತ್ತೆ ಊರು ಬಿಟ್ಟೆ ಕೆಲಸ ತಗೊಂಡೆ ಆದರೆ ನಿನ್ನ ನೆನಪು ಇನ್ನೂ ಹಾಗೆ ಇದೆ.

ನೀ ಹೇಗಿದ್ದಿಯಾ ಎಂದು ಅಮ್ಮನನ್ನು ಕೇಳಿದಾಗ ಹಾ ಚೆನ್ನಾಗಿ ಇದಾಳೆ ಮೊನ್ನೆ ತಾನೇ ಒಂದು ಮಗು ಆಗಿದೆ ಎಂದಳು. ಕೇಳಿ ಒಂದೆಡೆ ಖುಷಿ ಮತ್ತೊಂದೆಡೆ ದುಃಖ. ಒಟ್ಟನಲ್ಲಿ ಚೆನ್ನಾಗಿರು ಕಣೇ ಅಷ್ಟೇ.

ದುಃಖದೊಂದಿಗೆ,

ನಿನ್ನ ನೆನಪಲ್ಲಿರುವ ನಿನ್ನ ಹುಡುಗ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಅಪ್ಪಟ ಧಾರವಾಡ ನೆಲದ ಕಾದಂಬರಿ