ಅದೇ, ಆ ಹುಡುಗ - ಹುಡುಗಿ...

ಕಾಲೇಜಿಗೆ ಬೇರೆ ಲೇಟ್ ಆಗಿತ್ತು. ಸ್ವಲ್ಪ ಲೇಟಾಗಿ ಎದ್ದಿರುವುದೇ ನನ್ನ ಅವಸರಕ್ಕೆ ಕಾರಣವಾಗಿತ್ತು. ಬೆಳಿಗ್ಗೆ ಇರುವುದು ಒಂದೇ ಬಸ್ಸು, ಅದನ್ನ ಮಿಸ್ ಮಾಡ್ಕೋಬಾರದು ಅಂತ ಹೇಗೋ ರೆಡಿಯಾಗಿ ಬಸ್ ಸ್ಟ್ಯಾಂಡ್ ಗೆ ಬರೋ ಅಷ್ಟೊತ್ತಿಗೆ ಕರೆಕ್ಟಾಗಿ ಬಸ್ಸು ಬಂತು. ಅದು ಕೂಡಾ ಲೇಟಾಗಿ ಬಂದಿತ್ತು. ನನ್ನ ಅದೃಷ್ಟ ಚೆನ್ನಾಗಿದೆ ಎಂದುಕೊಳ್ಳುತ್ತಾ ಸಿಕ್ಕಿದ್ದ ಒಂದು ಸೀಟಿಗೆ ತಲೆಯನ್ನು ಒರಗಿಸಿದ್ದೆ.

ನನ್ನ ಪಕ್ಕದಲ್ಲಿ ಕುಳಿತಿದ್ದ ಒಬ್ಬ ಹುಡುಗ ಎದುರಿಗೆ ನಿಂತಿದ್ದ ಒಂದು ಹುಡುಗಿ,‌ಅವರಿಬ್ಬರು ಪರಸ್ಪರ ಯಾರಿಗೂ ಗೊತ್ತಾಗದಂತೆ ಕಣ್ಣು-ಕಣ್ಣಲ್ಲೆ ಆಂಗಿಕಾಭಿನಯ ಮಾಡುತ್ತಾ ಮೂಕ ಸಂಭಾಷಣೆಯನ್ನು ನಡೆಸುತ್ತಿದ್ದರು. ನಾನು ಅದನ್ನು ಕಳ್ಳ ಬೆಕ್ಕಿನಂತೆಯೇ ಕದ್ದು ಇಣುಕಿ ನೋಡುತ್ತಿದ್ದೆ. ಅವಳನ್ನು ನೋಡುತ್ತಾ ಅವನು ನಗುತ್ತಿದ್ದ. ಅವನ ನಗೆ ತನಗೂ ಒಪ್ಪಿಗೆಯೆಂಬಂತೆ ಅವಳು ಪ್ರತಿಯಾಗಿ ತನ್ನ ನಗೆಯನ್ನು ಅವನೆಡೆಗೆ ಎಸೆಯುತ್ತಿದ್ದಳು. ಅವರಿಬ್ಬರ ಈ ಕಣ್ಕಟ್ಟು ಆಟವನ್ನು ನಾನು ನನ್ನ ಕಿರುಗಣ್ಣಿನಲ್ಲಿಯೆ ನೋಡುತ್ತಾ ಮುಂದೆನಾಗುತ್ತೋ ಅಂತ ಅವರನ್ನೇ ಗಮನಿಸುತ್ತಲಿದ್ದೆ.

ಅವರು ಆ ನಗುವಿನಲ್ಲಿಯೇ, ಕಣ್ಣು-ಕಣ್ಣುಗಳಲ್ಲಿಯೇ ಮಾತನಾಡುತ್ತಾ, ಅವನ ನಗುವಿಗೆ ಅವಳು ನಾಚುತ್ತಾ ನಿಂತಿದ್ದಳು. ಅವರಿಗೆ ಪರಸ್ಪರ ಮಾತನಾಡುವಾಸೆ. ಆದರೆ, ಈ ಬಸ್ ಏಕೋ ಅವರಿಗೆ ಸಾಥ್ ಕೊಟ್ಟಿರಲಿಲ್ಲ. ಬಸ್ ನಲ್ಲಿ ಮಾತನಾಡುವುದು ತರವಲ್ಲವೆಂದು ಅರ್ಥೆಸಿಕೊಂಡ ಅವರು, ಮಾತನಾಡದೆ ನಗುವಿನಲ್ಲಿಯೆ ಸಮಯವನ್ನು ಮಧುರವಾಗಿಸುತ್ತಿದ್ದರು.

ಕಡೆಗೆ ಬಸ್ ತನ್ನ ನಿಲುಗಡೆಯ ನಿಲ್ದಾಣಕ್ಕೆ ಬಂದಾಗ ಇಬ್ಬರಿಗೂ ಏನೋ ಒಂಥರಾ ಭಯ, ಹೆದರಿಕೆ. ಇಳಿಯುವ ಪ್ರಸಂಗ ಬಂದಾಗ ಬಿಟ್ಟು ಹೋಗಲೇಬೇಕಾ ಎನ್ನುವ ಭಾವ. ಮುಂದೆ ಹೇಗರ ಎನ್ನುವ ಯೋಚನರ ಅವರಿಗಾಗಿತ್ತು. ನನಗೂ ಸಹ ಅವರು ಮುಂದೆ ಏನೂ ಮಾಡುತ್ತಾರೆ ಎನ್ನುವ ಒಂದು ಥರಾ ಆತಂಕ.

ಕಡೆಗೆ, ಹುಡುಗನ ತಲೆಗೆ ಏನೋ ಹೊಳೆದಂತಾಗಿ ಖುಷಿಯಿಂದ ನಗುತ್ತಾ ಪೆನ್ನನ್ನು ತೆಗೆದುಕೊಂಡು ತಾನು ಕುಳಿತಿದ್ದ ಸೀಟಿನ ಎದುರಿಗೆ ತನ್ನ ನಂಬರನ್ನು ಬರೆದು ಖುಷಿಯಿಂದ ಅವಳೆಡೆಗೆ ನೋಡಿ, ಅದನ್ನು ನೋಡುವಂತೆ ಕಣ್ಸನ್ನೆಯಲ್ಲಿ ಹೇಳಿ ಹೋದ. ಅದನ್ನು ಗ್ರಹಿಸಿದ ಆ ಬಾಲೆ, ಬೇಗನೆ ತನ್ನ ಮೊಬೈಲ್ ನಲ್ಲಿ ನಂಬರನ್ನು ಸೇವ್ ಮಾಡಿಕೊಂಡು ಹೊರಟಳು. ನಂಬರ್ ಸಿಕ್ಕ ಸಂತೋಷದಿಂದ ಅವಳ ಮೊಗವು ಖುಷಿಯಿಂದ ಕುಣಿದಾಡುತ್ತಿತ್ತು.

ನಾನು ಸ್ವಲ್ಪ ದಿನ ಆದ ಮೇಲೆ ಆ ಬಸ್ ಗೆ ಹತ್ತಿದಾಗ ಇಬ್ಬರು ಹುಡುಗ-ಹುಡುಗಿ ನನ್ನ ಪಕ್ಕದ ಸೀಟಿನಲ್ಲಿ ಮಾತನಾಡುತ್ತಾ ಕುಳಿತಿದ್ದರು. ನೋಡಿದರೆ ಅದೇ ಆ ಹುಡುಗ-ಹುಡುಗಿ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಅಪ್ಪಟ ಧಾರವಾಡ ನೆಲದ ಕಾದಂಬರಿ