ಸ್ವಾದ-ರುಚಿಯ ಸಮ್ಮಿಲನದ ಧಾರವಾಡ ಪೇಡಾ

ಒಂದೊಂದು ಊರು ಒಂದೊಂದು ವಸ್ತುವಿನಿಂದ, ಸ್ಥಳದಿಂದ ಪ್ರಸಿದ್ದತೆಯನ್ನು ಹೊಂದಿರುತ್ತದೆ. ಚನ್ನಪಟ್ಟಣದ ಗೊಂಬೆಗಳು, ಗೋಕಾಕ್ ಕರದಂಟು, ಬೆಳಗಾವಿಯ ಕುಂದಾ, ಹುಬ್ಬಳ್ಳಿಯ ಮಿರ್ಚಿ-ಮಂಡಕ್ಕಿ, ಕೊಣ್ಣುರಿನ ಪೇರಳೆ, ಧಾರವಾಡದ ಪೇಡಾ ಹೀಗೆ ಒಂದೊಂದು ವಿಶೇಷತೆಯನ್ನು ಹೊಂದಿವೆ.

ಧಾರವಾಡಕ್ಕೆ ಹೋಗಿ ಧಾರವಾಡ ಪೇಡತಿಂದ ಬಂದಿಲ್ಲ ಅಂದ್ರ ನಿಮ್ಮ ಜನ್ಮ ಅಪೂರ್ಣವಾದಂತೆ, ನೋಡ್ರೀ ಆಗ್ಲೇ ಧಾರವಾಡ ಪೇಡಾ ಅಂದ ಕೂಡ್ಲೆ ಬಾಯಲ್ಲಿ ಹೇಗೆ ನೀರೂರತಾ ಇದೆ ಅಂತ. ಈ ಪೇಡಾ ಇದೆ ಅಲ್ರೀ, ಇದು 19ನೇ ಶತಮಾನದಾಗ ಉತ್ತರ ಪ್ರದೇಶದಿಂದ ನಮ್ಮ ರಾಜ್ಯಕ್ಕೆ ವಲಸೆ ಬಂದ “ರಾಮ್ ರತನ್ ಸಿಂಗ್ ಠಾಕೂರ್” ರಿಂದ ಧಾರವಾಡಕ್ಕೆ ಬಂತು. ತಮ್ಮ ಮನೆಯಲ್ಲಿ ಅಷ್ಟೇ ತಯಾರಿಸಿ ತಿನ್ನುತ್ತಿದ್ದ ಇದನ್ನು ಠಾಕೂರ್ ಅವರ ಮೊಮ್ಮಗ “ಬಾಬುಸಿಂಗ್ ಠಾಕೂರ್ ಅವರು ಶಾಣೆತನ ಮಾಡಿ  ಇದನ್ನು ಮಾರಾಟ ಮಾಡತೊಡಗಿದರು. ಜನಾನೂ ಇದನ್ನು ಬಾಯಿ ಚಪ್ಪರಿಸಿಕೊಂಡ ತಿನ್ನಾಕ್ ಶುರು ಮಾಡಿದರು. ಇವರ ಮೊದಲ ಅಂಗಡಿ ಶುರುವಾದದ್ದು ಲೈನ್ ಬಜಾರ್‍ನಲ್ಲಿ. ಅದಕ್ಕೆ ಲೈನ್ ಬಜಾರ್‍ಗೆ ಪೇಡಾ ಲೈನ್ ಬಜಾರ್ ಎಂದು ಕರೀತಾರ, ಲೈನ್ ಬಜಾರಗೆ ಹೋದ್ರೇ ಮಾತ್ರ ನಿಮಗೆ ನಿಜವಾದ ರುಚಿ ಇರೋ ಠಾಕೂರ್ ಪೇಡಾ ಸಿಗೊದು.  ಠಾಕೂರ್ ಪೇಡಾ ಎಂದು ಹೇಳಿ ಮಾರುತ್ತಿದ್ದ ಇದು ಇಂದು ಧಾರವಾಡದ ಪರಿಸರಕ್ಕೆ ಒಗ್ಗಿ “ಧಾರವಾಡ ಪೇಡಾ” ಎಂದು ಕರೆಸಿಕೊಳ್ಳುವಷ್ಟರÀ  ಮಟ್ಟಿಗೆ ಪ್ರಸಿದ್ದ ಪಡೆದತಿ.

ಈ ಪೇಡಾವನ್ನು ಮಾಡುವ ಕರಾಮತ್ತು ಈ ಕುಟುಂಬಕ್ಕೆ ಮಾತ್ರಗೊತ್ತಿದೆ. ತಲೆತಲಾಂತರಗಳಿಂದ ಈ ಗುಟ್ಟು ಇವರನ್ನು ಬಿಟ್ಟು ಬೇರೆ ಯಾರಿಗೂ ಗೊತ್ತಾಗದಂತೆ ಇವರಲ್ಲಿಯೆ ಹರಿದುಕೊಂಡು ಬರ್ತಿದೆ ಯಾವುದೇ ಕೃತಕ ಬಣ್ಣ ಇಲ್ಲದೆ ರಾಸಾಯಿನಿಕಗಳ ಬಳಕೆ ಇಲ್ಲದೆ ಕೇವಲ ಹಾಲು, ಸಕ್ಕರೆಯ ಮಿಶ್ರಣದಿಂದ ತಯಾರಿಸಲ್ಪಡುವ ಇದು ತನ್ನದೆ ಆದಂತಹ ಸ್ವಾಭಾವಿಕ ಬಣ್ಣವನ್ನು ಹೊಂದಿದೆ. ಈ ಪೇಡಾಗೆ ಇರೋ ಸ್ಪರ್ಧಿ ಅಂದ್ರೇ ಅವರೇ ರೀ ಮಿಶ್ರಾಪೇಡಾದವರು ಮಿಶ್ರಾ ಪೇಡಾ ಮತ್ತು ಠಾಕೂರ್ ಪೇಡಾದಲ್ಲಿ ಯಾವುದು ಹೆಚ್ಚು ಚೆನ್ನಾಗಿರುತ್ತೇ ಅಂತ ಹೇಳೋಂದು ಕಷ್ಟ ಅದು ಅವರವರ ಬಾಯಿರುಚಿಗೆ ಬಿಟ್ಟ ವಿಷಯ. ಈ ಪೇಡಾದ ವಿಶೇಷತೆ ಏನೆಂದರೆ ಇದನ್ನು ತಂಗಳು ಪೆಟ್ಟಿಗೆ (ಫ್ರೀಡ್ಜ್) ಅಲ್ಲಿ ಇಡದೆ ಸಾಮಾನ್ಯ ಕೋಣೆಯ ತಾಪಮಾನದಲ್ಲಿಟ್ಟರೆ ಸಾಕು ಒಂದು ವಾರದವರೆಗೂ ಇಟ್ರೂ ಏನು ಆಗುವುದಿಲ್ಲ. ಒಂದು ವಾರದ ತನಕ ಎಲ್ಲಿ ಉಳಿತಾವ್ರೀ ತಂದ ದಿನಾನ ಖಾಲಿ ಆಗ್ತಾವರೀ.......

ಪ್ರತಿದಿನವೂ ತಯಾರಾಗುವ ಈ ತಾಜಾ ಪೇಡಾವನ್ನು ಕೊಳ್ಳಲು ಸರದಿಯಲ್ಲಿ ನಿಂತ್ಕೊಬೇಕ್ರೀ ಅಷ್ಟೋಂದು ಫೇಮಸ್ ರೀ ಈ ಧಾರವಾಡ ಪೇಡಾ, ಪೇಡಾ ಬಿಟ್ರ ಧಾರವಾಡ ಇಲ್ಲ, ಧಾರವಾಡ ಬಿಟ್ರ ಪೆÉೀಡಾ ಇಲ್ಲ ಅನ್ನೋ ಹಂಗ ಎರಡ ಒಂದನ್ನೊಂದು ಅಂಟಕೊಂಡು ಬಿಟ್ಟಾವರೀ. ಪೇಡಾ ದಿನವೊಂದಕ್ಕೆ ಏನಿಲ್ಲ ಅಂದ್ರೂ 150-175 ಕೇಜಿವರೆಗೂ ಖರ್ಚಾಗುತ್ತೇ, ಇನ್ನು ರಿಸಲ್ಟ್  ಬಂದಾಗ, ವಿಶೇಷ ಸಮಾರಂಭಗಳೇನಾದ್ರೂ ಇದ್ರೇ ಇನ್ನು ಜಾಸ್ತಿ ಖರ್ಚಾಗುತ್ತೇ ಇದಕ್ಕೆ ಜಿಯೋಗ್ರಾಫಿಕಲ್ ಇಂಡಿಕೇಷನ್ (GI) ಟ್ಯಾಗ್ ಸಹ ಕೊಡಲಾಗಿದೆ, ಧಾರವಾಡ ಪೇಡಾದ GI ಟ್ಯಾಗ್ 85.

ಧಾರವಾಡ ಪೇಡಾಕ್ಕೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಬಂದಿವೆ. 1913ರಲ್ಲಿ ಲಾರ್ಡ್ ವಿಲಿಂಗ್ಟನ್ ಮೆಡಲ್, 1999 ರಲ್ಲಿ ಕರ್ನಾಟಕ ಸರ್ಕಾರದ ಪ್ರಶಸ್ತಿ, 2001ರಲ್ಲಿ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, 2002ರಲ್ಲಿ ರಾಜೀವ್‍ಗಾಂದಿ ಎಕ್ಸಲೆನ್ಸಿ ಪ್ರಶಸ್ತಿ ಮುಂತಾದವುಗಳು ಧಾರವಾಡ ಪೇಡಾದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿವೆ.
ಇಷ್ಟೇಲ್ಲಾ ಓದಿದ ಮೇಲೂ ಧಾರವಾಡ ಪೇಡಾ ತಿನ್ನಬೇಕು ಅಂತ ಅನಿಸ್ತಿಲ್ವಾ? ಬೇಗ ಹೋಗ್ರೀ ಇಲ್ಲಂದ್ರೆ ಪೇಡಾ ಖಾಲಿ ಆಗುತ್ತೆ ಬೇಗ ಪೇಡಾ ತಂದು ನೀವು ತಿಂದು ನಿಮ್ಮನೆಯವರಿಗೂ ತಿನಿಸಿ ಬಾಯಿ ಸಿಹಿ ಮಾಡ್ಕೋರಿ..... !!

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಅಪ್ಪಟ ಧಾರವಾಡ ನೆಲದ ಕಾದಂಬರಿ