ಪ್ರಾದೇಶಿಕತೆಯ ಅನಾವರಣದ 'ರೊಟ್ಟಿ ಮುಟಗಿ'

ನಮ್ಮ ನಡುವಿನ ತರುಣ ಕಥೆಗಾರ ಟಿ.ಎಸ್.ಗೊರವರ ಅವರು ಬರೆದಿರುವ ಮೊದಲ ಕಾದಂಬರಿ ರೊಟ್ಟಿ ಮುಟಗಿ.

ಅಪ್ಪಟ ಪ್ರಾದೇಶಿಕತೆಯನ್ನು, ಒಂದು ಹಳ್ಳಿಯ ಚಿತ್ರಣವನ್ನು ಓದುಗರಿಗೆ ಕಟ್ಟಿಕೊಡುವಲ್ಲಿ ಈ ಕಾದಂಬರಿ ಯಶಸ್ವಿಯಾಗಿದೆ ಎಂದು ಹೇಳಬಹುದು.

ಬಾಲ್ಯದಲ್ಲಿ ತನ್ನ ತಂದೆಯನ್ನು ಕಳೆದುಕೊಂಡ ದ್ಯಾಮ, ತನ್ನ ತಾಯಿಯ ಆಸರೆಯಲ್ಲಿ ಬೆಳೆಯುತ್ತಾನೆ. ಇದ್ದಕ್ಕಿದ್ದ ಹಾಗೆ ತಾಯಿಯೂ ತೀರಿಕೊಂಡಾಗ ಅನಾಥನಾಗುವ ದ್ಯಾಮ, ಅವರಿವರ ಆಸರೆಯಲ್ಲಿ ಬೆಳೆದು ತನ್ನ ಬದುಕನ್ನು ಕಟ್ಟಿಕೊಳ್ಳುವ ಕಥನವೇ ರೊಟ್ಟಿ ಮುಟಗಿ.

ರೊಟ್ಟಿ ಮುಟಗಿ ಈ ಕಥನದ ಒಂದು ಪಾತ್ರವಾಗಿದೆ. ತನ್ನ ಹೆಂಡತಿ ಲಕ್ಷ್ಮವ್ವ ರೊಟ್ಟಿಮುಟಗಿ ಮಾಡಿಕೊಟ್ಟಾಗಲೆಲ್ಲ ದ್ಯಾಮನಿಗೆ ತನ್ನವ್ವನ ನೆನಪಾಗುತ್ತದೆ. ಇದು ಕೇವಲ ದ್ಯಾಮನ ಬದುಕಿನ ಕಥನವಾಗದ ಒಂದು ಹಳ್ಳಿಯ, ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಕಾದಂಬರಿಯಲ್ಲಿ ಬರುವ ರೊಟ್ಟಿಮುಟಗಿ, ತತ್ತಿಸಾರು, ದನ ಕಾಯುವ ಪ್ರಸಂಗ, ಎಲ್ಲವೂ ಇಲ್ಲಿ ವಿಶೇಷವಾಗಿವೆ. ಗೊರವರ ಅವರ ಒಂದು ವಿಶೇಷತೆ ಏನೆಂದರೆ ಅವರು ಬಳಸುವ ರೂಪಕಗಳು.

ದಿನಗಳು ಚಳಿಗಾಲದಲ್ಲಿ ಮರದ ಎಲೆಗಳು ಒಂದೊಂದಾಗಿ ಕಳಚಿ ಬೀಳುವಂತೆ ಒಂದರ ಹಿಂದೆ ಒಂದು ಸಾಲುಗಟ್ಟಿದ ದಿನಗಳು ಕಾಲನೊಳಗೆ ಒಂದಾಗಿ ಹೋದವು. (ಪುಟ-೧೩)

ಹೆಸರೇ ಗೊತ್ತಿಲ್ಲದ ಕಾಡು ಹೂಗಳ ಸಂಗ ಮಾಡಿದ್ದವು ಜೇನು ಹುಳುಗಳು. (ಪುಟ-೧೯)

ಕಿಟಕಿಯಿಂದ ಸಣ್ಣಗೆ ಸೆರಗು ಬೀಸತೊಡಗಿದ್ದ ಗಾಳಿಗೆ ಅವಳ ಮುಂಗುರುಳು ವಿಜಯದ ಪತಾಕೆಯಂತೆ ಹಾರಾಡತೊಡಗಿದ್ದವು.(ಪುಟ-೪೩)

ಇಂತಹ ಹಲವಾರು ಉದಾಹರಣೆಗಳನ್ನು ನಾವು ಕಾದಂಬರಿಯಲ್ಲಿ ಕಾಣಬಹುದು. ಕಾದಂಬರಿಯ ಅಂತ್ಯದ ಬಗ್ಗೆ ಸಣ್ಣ ತಕರಾರಿದೆ. ಇದ್ದಿಲಿನ ಭಟ್ಟಿಯ ಉರಿಯಲ್ಲಿ ತನ್ನ ಅವ್ವ ಕಾಣಿಸಿದಂತಾಗುವ ದ್ಯಾಮನು ಉರಿಯೆಡೆಗೆ ತೂರಿಕೊಂಡು ಹೋಗುವ  ಅಂತ್ಯ ಮಾಡಿದ್ದಾರೆ. ಒಟ್ಟಾರೆ ಮೊದಲ ಕಾದಂಬರಿಯಲ್ಲಿ ಭರವಸೆಯನ್ನು ಮೂಡಿಸಿದ್ದಾರೆ. ರೊಟ್ಟಿ ಮುಟಗಿ ರುಚಿಯಾಗಿದೆ. ಆರಾಮಾಗಿ ಸವಿಯಬಹುದು.

ರಾಜೇಶ್ವರಿ ಲಕ್ಕಣ್ಣವರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಅಪ್ಪಟ ಧಾರವಾಡ ನೆಲದ ಕಾದಂಬರಿ