ಬದುಕಿನ ಅನಾವರಣದ "ಬೊಗಸೆಯಲ್ಲಿ ಮಳೆ"

ಮೊದಲಿನಿಂದಲೂ ಜಯಂತ ಕಾಯ್ಕಿಣಿ ಎಂದರೇ ಅದೆಂತಹದೋ ಮೋಹ. ಪುಸ್ತಕದಂಗಡಿಗೆ ಹೋದಾಗಲೆಲ್ಲ ನನ್ನ ಕಂಗಳು ಕಾಯ್ಕಿಣಿ ಪುಸ್ತಕಗಳನ್ನು ಹುಡುಕುತ್ತವೆ. ಅವರ ಪುಸ್ತಕಗಳು ನನ್ನ ಹತ್ತಿರ ಇದ್ದರೂ ಕೂಡ, ಅವರ ಪುಸ್ತಕವನ್ನು ಕೈಗೆತ್ತಿಕೊಂಡು ಮುಖಪುಟವನ್ನು ಸವರಿ , ಒಂದೆರಡು ಪುಟಗಳ ಮೇಲೆ ಕೈಯಾಡಿಸಿದರೆ ಸಮಾಧಾನ. ಅವರ ಪುಸ್ತಕಗಳೆಂದರೆ ಅದೆಂಥಹದೋ ಅಚ್ಚರಿ,ಬೆರಗು, ಕುತೂಹಲ, ಅವರು ಜಗವನ್ನು ನೋಡುವ ರೀತಿ, ಬಳಸುವ ಶಬ್ಧ, ರೂಪಕಗಳು ಸದಾ ನನಗೆ ಅಚ್ಚರಿಗೆ ದೂಡುತ್ತವೆ. ಇತ್ತೀಚೆಗೆ ಓದಿದ ಕಾಯ್ಕಿಣಿ ಅವರ ಅಂಕಣ ಬರಹಗಳ ಸಂಗ್ರಹವಾದ "ಬೊಗಸೆಯಲ್ಲಿ ಮಳೆ" ಪುಸ್ತಕ ಓದಿದಾದ ಮೇಲೆಯೂ ಇನ್ನೂ ಕಾಡುತ್ತಿದೆ. ಮುಂಬೈ ಹಾಗೂ ಗೋಕರ್ಣದ ರಥಬೀದಿಗಳಲ್ಲಿ ಒಂದು ಸುತ್ತು ಸುತ್ತಿದಂಗಾಯ್ತೂ. ಅವರಿಗೆ ಅವರೇ ಸಾಟಿ. ಕಾಯ್ಕಿಣಿ ಅವರ ಅಲೆಮಾರಿತನದ ಅನುಭವಗಳು ಸೃಜನಶೀಲ ಬರಹಗಳಾಗಿ ಹೊರ ಹೊಮ್ಮಿವೆ. ಮುಂಬೈ ನಗರದ ಪ್ರೀತಿ, ಗೋಕರ್ಣದೊಂದಿಗಿರುವ ನಂಟು, ಆಪ್ತತೆ ಅವೆಲ್ಲವೂ ಅದರೆಡೆಗಿರುವ ತುಡಿತಗಳಾಗಿ ಹೊರ ಹೊಮ್ಮಿವೆ. ಮುಂಬೈ ಬದುಕನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ, ಶಹರು ಜೀವನದ ಸಾಮಾಜಿಕ ಸೂಕ್ಷ್ಮಗಳು, ತವಕ- ತಲ್ಲಣಗಳು, ನಗರದ ಬದುಕಿನ ಕಥೆಗಳು ಇಲ್ಲಿ ಅಕ್ಷರಗಳಲ್ಲಿ ಅನಾವರಣಗೊಂಡಿವೆ. ಇಲ್ಲಿ ಮುಂಬೈನ ಆಧುನಿಕತೆಯ ಜೊತೆಗೆ , ರಥಬೀದಿಯ ಕತೆಯನ್ನು ಲೇಖಕರು ದಾಖಲಿಸಿದ್ದಾರೆ. ಇದರ ಮತ್ತೊಂದು ವಿಶೇಷತೆ ಏನೆಂದರೆ ಅತೀ ಸಣ್ಣ ವಿಷಯಗಳನ್ನಿಟ್ಟುಕೊಂಡು ಅದನ...