ಇಳಿಸಂಜೆಗಳು ಮಾತನಾಡುತ್ತವೆ...

ಅದು ನಿಡುಸುಯ್ಯುವ ನಿಚ್ಚಳ ಮಧ್ಯಾಹ್ನ. ಎಂದಿನಂತೆಯೇ ಸೂರ್ಯನ ಉದಯದೊಂದಿಗೆ ಬೆಳಗು ಮೂಡುತ್ತದೆ. ಚಂದ್ರನೊಂದಿಗೆ ಕತ್ತಲು ಸುತ್ತಲು ಚಮಚ ಉತ್ತರ. ಇದು ತಪ್ಪದೇ ನಡೆಯುವ ನಿತ್ಯದ ಚಾಳಿ. ಚಳಿಗಾಲದ ಹಗಲುಗಳು ಮುಸುಕು ಹೊದ್ದು ಮಲಗಿಬಿಟ್ಟಿರುತ್ತವೆ. ರಗ್ಗಿನೊಳಗೆ ಬೆಚ್ಚನೆಯ ಕನಸುಗಳು ಮೂಡುತ್ತಿರುತ್ತವೆ. ಹಗಲುಗಳು ಸರಿಯುತ್ತದೆ. ಇರುಳುಗಳು ಸುಳಿದಾಡುತ್ತವೆ. ಚಂದ್ರಾಮ ಮುಗುಳ್ನಗುತ್ತಾನೆ. ರಗ್ಗಿನೊಳಗೆ ಹತ್ತಾರು ಮಾತುಗಳು ಒಳಸುಳಿಯುತ್ತವೆ ಯಾರಿಗೂ ಕೇಳದಂತೆ.

ಸಂಜೆಯೂ ಮಾತ್ರ ಎಂದಿನಂತೇ ಆಪ್ತವಾಗಿರುತ್ತದೆ. ಕೆಂಪಡರುತ್ತಿರುವ ಆ ದಿನಕರನನ್ನು ನೋಡುವುದೇ ಒಂದು ಸೊಗಸು. ರಸ್ತೆಯ ತುದಿಯಲ್ಲಿ ಎರಡು ಜೋಡಿ ಹೆಜ್ಜೆಗಳು ಒಟ್ಟಿಗೆ ಅಂಗೈಗಳನ್ನು ಬೆಸೆದುಕೊಂಡು ಸುಮ್ಮನೆ ಹೆಜ್ಜೆಯನ್ನು ಎಣಿಸುತ್ತಿವೆ. ಮೌನವೂ ಕೂಡ ಮಾತನ್ನು ಕಲಿಯುತ್ತಿದೆ. ಹಬಾಯಾಡುತ್ತಿರುವ ಚಹಾ, ಚಹಾದ ಕಪ್ಪಿನ ಸುತ್ತಲು ಹೆಣೆದ ಬೆರಳುಗಳು ಚೂರೇ ಚೂರು ಕಪ್ಪಿನ ಅಲಗನ್ನು ತುಟಿಗೆ ತಾಕಿಸುತ್ತಾ, ಕಂಗಳೆರಡು ಸುತ್ತ- ಮುತ್ತಲೂ ಓಡುತ್ತಿರುವ ಜಗವನ್ನು ತಾಕುತ್ತಾ, ಮತ್ತೆ ಕಪ್ಪಿನೊಳಗೆ ಲೀನವಾಗುತ್ತದೆ. ದಿನವೂ ಅದೇ ತಿರುವಿನಲ್ಲಿ ಕುಳಿತಿರುವ ಮುದುಕಿಯೊಬ್ಬಳು ಪರಿಚಯದಂತೆ ನಗುವನ್ನು ಬೀರುತ್ತಾಳೆ.

ಇಳಿಸಂಜೆಗಳು ಜಾರಿಕೊಳ್ಳುತ್ತವೆ, ನಸುಕಾದ ಮಬ್ಬಿನೊಳಗೆ. ಮೋಡಗಳು ಒಂದಕ್ಕೊಂದು ರಂಗೇರಿಸಿಕೊಳ್ಳುತ್ತವೆ. ಅಲ್ಲೆಲ್ಲೊ ಮೆಲುದನಿಯಲ್ಲಿ ಹಾಡು ಕಿವಿಗೆ ಬೀಳುತ್ತದೆ. ಕಾಫಿ ಕಪ್ಪುಗಳು ಪರಸ್ಪರ ಮಾತನಾಡಿಕೊಳ್ಳುತ್ತವೆ, ಅದರ ಎದುರಿಗೆ ಕುಳಿತ ತರುಣ ಜೋಡಿಗಳ ತುಟಿಗಳು ಏನನ್ನೊ ಹೇಳಲು ತವಕಿಸುತ್ತಿವೆ, ಮಾತು ಗಂಟಲಲ್ಲಿಯೇ ಉಳಿದಿದೆ. ಕಣ್ಸನ್ನೆಗಳೇ ಮಾತುಗಳಾಗುತ್ತಿವೆ. ಅದು ಒಬ್ಬರಿಗೊಬ್ಬರಿಗೆ ಅರ್ಥವಾದಂತೆ ಒಬ್ಬರ ಮುಂಗೈ ಮೇಲೆ ಮತ್ತೊಬ್ಬರ ಕೈ ನಗುತ್ತಿದೆ.

ರಸ್ತೆ ಪಕ್ಕದಲ್ಲಿ ಪುಸ್ತಕ ಮಾರುವವನೊಬ್ಬ ಇಂದಾದರೂ ಒಬ್ಬರಾದರು ಪುಸ್ತಕ ಕೊಳ್ಳಬಹುದೆಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದಾನೆ. ಪುಟದ ಕಿವಿ ಹಾಗೇ ಮಡಿಚಿಟ್ಟ ಹಾಗೇಯೇ ಇದೆ. ಅದನ್ನು ಬಿಡಿಸುವ ಪ್ರಯತ್ನವನ್ನು  ಮಾಡಿಲ್ಲ. ಕಡೆಯ ಪುಟಗಳಲ್ಲಿ ಬಚ್ಚಿಟ್ಟ ನವಿಲುಗರಿ ಇನ್ನೂ ಮರಿ ಹಾಕಿಲ್ಲ..ಸಂಜೆಗಳು ತಣ್ಣಗಾಗುತ್ತವೆ. ಅಲ್ಲಲ್ಲಿ ಗುಸು-ಗುಸು ಮಾತನಾಡಿಕೊಳ್ಳುತ್ತವೆ ನಮ್ಮ- ನಿಮ್ಮ ಹಾಗೇ.....

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಅಪ್ಪಟ ಧಾರವಾಡ ನೆಲದ ಕಾದಂಬರಿ