ಶಿಶಿರ ಋತು ಕಾಡುವ ನೆನಪುಗಳ ಸಂತೆ..

ಶಿಶಿರ ಕಾಡುವ ನೆನಪುಗಳ ಸಂತೆ. ಮೆಲ್ಲನೆ ಚಳಿ ಅಡಿಯಿಡುವ ಹೊತ್ತದು. ಮುಸುಕಿನಲ್ಲಿ ಅವಿಸಿಕೊಳ್ಳುವ ಹೊತ್ತು, ಹಗಲು ಕಿರಿದಾಗಿ ಇರುಳು ದೊಡ್ಡದಾಗಿ ಕಾಣುವ ಹೊತ್ತದು. ಬೆಳಿಗ್ಗೆ ಏಳುವಾಗ ಇನ್ನಷ್ಟು ಹೊತ್ತು ಕತ್ತಲಾಗೇ ಇರಬಾರದೆ ಎಂದು ಮುಸುಕೆಳದುಕೊಂಡು ಕನವರಿಸುವ ಘಳಿಗೆ.

ಶಿಶಿರವೆಂದರೆ ಮಂಜಲ್ಲಿ ಕಳೆದು ಹೋಗುವ ಹೊತ್ತು. ಸುಗ್ಗಿ ಮುಗಿಯುವ ಹೊತ್ತು. ರಸ್ತೆಯ ಮೂಲೆಯಲ್ಲಿರುವ ಬುಡ್ಡಣ್ಣನ ಟೀ ಅಂಗಡಿಯಲ್ಲಿ ಬಿಸಿ-ಬಿಸಿ ಮಿರ್ಚಿ, ಬಜಿ ಖರ್ಚಾಗುವ ಹೊತ್ತು. ನವವಿವಾಹಿತರಿಗೆ, ಪ್ರೇಮಿಗಳಿಗೆ ಅರೆ ಘಳಿಗೆಯು ಕನಸನ್ನು ಕನವರಿಸುತ್ತಿರುವ ಹೊತ್ತು, ಶಿಶಿರ ಹೀಗೆ ಹಲವಾರು ನೆನಪುಗಳನ್ನು ಹೊತ್ತುಕೊಂಡು ತರುವ ಹೊತ್ತು.

ನಯವಾದ ಮೈ, ಕೈ-ಕಾಲುಗಳು, ತುಟಿಯು ಸಣ್ಣದಾಗಿ ಒಡೆದು ಬಿರುಕು ಮೂಡಲಾರಂಭಿಸಿದಾಗ ಅರಿವಾಗೋದು ಶಿಶಿರ ಮೆಲ್ಲ ಅಡಿಯಿಟ್ಟಿದೆ ಎಂದು, ಈ ಸಮಯಯ ಮುಂಚಿನಂತೆಯೆ ಕೆಲಸ ಲಘು- ಬೇಗನೆ ಸಾಗುವುದಿಲ್ಲ,ಚಳಿಯ ಕಂಪನಕ್ಕೆ ನಡು-ನಡುವೊಮ್ಮೆ ಬಿಸಿ ಚಹಾವನ್ನು ಮೆಲ್ಲನೆ ಗುಟುಗುರಿಸುತ್ತಿರಬೇಕು.

ಶಿಶಿರದಲ್ಲಿ ತುಂಬಿದ ಬಸುರಿಯ ಹಾಗಿರುವ ಮರವೊಂದು ಒಮ್ಮೆಲೆ ಎಲೆಯುದುರಿ ಪಳೆಯುಳಿಕೆಯಂತಾಗಿ ರಸ್ತೆಯಲ್ಲೆಲ್ಲ ಎಲೆಗಳದೇ ಪಟ- ಪಟನೇ ಸದ್ದು, ಹಣ್ಣೆಲೆ ತಾನು ಉದುರಿ ಚಿಗುರೆಲೆ ಚಿಗುರಲು ಅವಕಾಶ ಕಲ್ಪಿಸುತ್ತಿದೆ. ಇದೇ ಅಲ್ಲವೇ ಪ್ರಕೃತಿಯ ನಿಯಮ, ಹಳೆಯದೆಲ್ಲ ಕಳೆದು ಹೋಗಿ ಹೊಸತನಕ್ಕೆ ಅವಕಾಶ ಕೊಡುವುದು.

ಮುಂಜು ಮುಸುಕಿಕೊಂಡಿರುವ ರಸ್ತೆಗಳು, ಹಗಲಿನಲ್ಲಿಯೆ ಹೆಡ್ ಲೈಟ್ ಹಾಕಿಕೊಂಡು ಓಡಾಡುತ್ತಿರುವ ವಾಹನಗಳು, ಮೈಯನ್ನು ಬೆಚ್ಚನೆ ಅಪ್ಪಿ ಗಟ್ಟಿಯಾಗಿ ಹಿಡಿದುಕೊಂಡಿರುವ ಸ್ವೇಟರ್, ಜಾಕೆಟುಗಳು. ಕಿವಿಯನ್ನು ಸುತ್ತುವರೆದಿರುವ ಉಣ್ಣೆಯ ಟೋಪಿಗಳು. ಈಗ ತಾನೇ ಹಬೆಯಾಡುತ್ತಿರುವ ಚಹಾ ಪಟ್ಟನೆ ತಣ್ಣಗಾಗುವುದು ಶಿಶಿರದಲ್ಲಿ ಮಾತ್ರ. ಹೀಗೆ ಚಳಿಗಾಲ ಕಾಡುತ್ತದೆ, ಕಾಡಿಸುತ್ತದೆ…

ಚಳಿಯ ಸುಳಿಗೆ ಸಿಲುಕಿದ ಪುಟ್ಟ ಹಕ್ಕಿಗಳು ಕೂಡ ಗೂಡನ್ನು ಬಿಟ್ಟು ಬೇಗ ಹೊರಡುವುದಿಲ್ಲ. ದಿನಕರ ಹೊರಗೆ ಬರಲೋ ಬೇಡ್ವೋ ? ಎಂದು ಮೊಡದ ಹಿಂದೆಯೇ ಅವಿತುಕೊಳ್ಳಲು ಹವಣಿಸುತ್ತಿರುತ್ತಾನೆ. ಈ ಶಿಶಿರ ಸುಮ್ಮನೆ ಬಂದು ಹೋಗುವುದಿಲ್ಲ. ಹೀಗೆ ನೆನಪುಗಳನ್ನು ರಾಶಿ ಹಾಕಿ ಹೋಗುವಂತಹದ್ದು.

ಶಿಶಿರ ಮರೆಯಾಗಿ ವಸಂತ ಅಡಿಯಿಡುತ್ತಿದ್ದಾನೆ. ವಸಂತನ ಆಗಮನವನ್ನು ಸ್ವಾಗತಿಸೋಣ ಶಿಶಿರದ ನೆನಪಿನೊಂದಿಗೆ…!!

(14-3-2018 ರ ಪ್ರಜಾವಾಣಿ ಹುಬ್ಬಳ್ಳಿ ಮೇಟ್ರೋ ಪತ್ರಿಕೆಯಲ್ಲಿ ಪ್ರಕಟವಾಗಿದೆ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಅಪ್ಪಟ ಧಾರವಾಡ ನೆಲದ ಕಾದಂಬರಿ