ಸರಳ ಕಥಾನಕದ, ವಿಶಿಷ್ಟ ಶೈಲಿಯ ಕರ್ವಾಲೋ


ನನಗೆ ಮೊದಲಿನಿಂದಲೂ ತೇಜಸ್ವಿ ನೆಚ್ಚಿನ ಲೇಖಕರು. ಅವರ ಪುಸ್ತಕಗಳ ಹೆಸರು ಬಹಳ ಮಜವಾಗಿರ್ತಾವೆ. ಪ್ಯಾಪಿಲಾನ್, ಕರ್ವಾಲೋ , ಮಿಸ್ಸಿಂಗ್ ಲಿಂಕ್ ಹೀಗೆ. ಒಂದು ದಿನ ಸಪ್ನಾಗೆ ಹೋದಾಗ ಕರ್ವಾಲೋ ಪುಸ್ತಕವನ್ನು ನೋಡಿ ಹೆಸರು ವಿಚಿತ್ರವಾಗಿದೆಯಲ್ಲ‌ ಎಂದುಕೊಳ್ಳುವಾಗ ತೇಜಸ್ವಿಯವರ ಹೆಸರನ್ನು ನೋಡಿ ಎದೆಗವಚಿಕೊಂಡು ತಗೊಂಡು ಬಂದಿದ್ದೆ.

ತಂದ ದಿನವೇ ಒಂದೇ ಗುಕ್ಕಿಗೆ ಕೂತು ಓದಿ ಮುಗಿಸಿದ್ದೆ. ಓದಿದ ಮೇಲೆ ಪ್ರಕೃತಿಯ ಹೊಸ ಪ್ರಪಂಚವೇ ಕಣ್ಣಿಗೆ ತೆರೆದುಕೊಂಡಿತ್ತು. ಹೆಸರು ಕರ್ವಾಲೋ ಆದರೂ ಇದರಲ್ಲಿ ಬರುವ ಎಲ್ಲ‌ ಪಾತ್ರಗಳು ಕೂಡ ಬಹುಮುಖ್ಯವಾಗಿವೆ. ಮಂದಣ್ಣ, ಪ್ಯಾರ ಹೀಗೆ ಯಾವುದೇ ಹೆಸರಿಟ್ಟಿದ್ದರು ನಡೆಯುತ್ತಿತ್ತು. ಸರಳ ಕಥಾನಕದ, ಕಲ್ಪನೆಯೊಂದಿಗೆ ಪ್ರಕೃತಿ , ಜೀವನಾನುಭವ ಹೀಗೆ ಎಲ್ಲವೂ ಇಲ್ಲಿ ಮಿಳಿತವಾಗಿರುವದರಿಂದ ಕಾದಂಬರಿ ಮತ್ತಷ್ಟು ಆಪ್ತವಾಗುತ್ತದೆ. ಎಲ್ಲರಿಗೂ ಬಹು ಸುಲಭವಾಗಿ ತಿಳಿಯುವಂತೆ ಸರಳ, ಸುಲಭ ಶೈಲಿಯಲ್ಲಿ ಬರೆಯುವುದು ತೇಜಸ್ವಿಯವರ ವೈಶಿಷ್ಟ್ಯವೇ ಸರಿ.

ಅದರಲ್ಲೂ ಮಂದಣ್ಣನ ಪಾತ್ರ ನನಗೆ ಬಹು ಇಷ್ಟವಾದ್ದು. ಪ್ಯಾರ, ಪ್ರಭಾಕರ, ಕರಿಯಪ್ಪ, ಕಿವಿ ನಾಯಿ ಹೀಗೆ ಎಲ್ಲರೊಂದಿಗೆ ಸಾಗುತ್ತಾ ಹೋಗುವ ಕಾದಂಬರಿ ಒಮ್ಮೆಲೆ ಜೀವ ವಿಕಾಸದತ್ತ ನಮ್ಮನ್ನು ಕೊಂಡೊಯ್ಯುತ್ತದೆ. ಮೂರರ ಮುಂದೆ ಏಳು ಸೊನ್ನೆಗಳಷ್ಟು ಹಿಂದಿನ ಹಾರುವ ಓತಿಯತ್ತ ನಮ್ಮನ್ನು ಸೆಳೆದೊಯ್ಯುತ್ತಾರೆ. ಮೂಡಿಗೆರೆಯಲ್ಲಿ ಸಾಗುವ ಕಥೆಯಲ್ಲಿ ಇಡೀ ಮಲೆನಾಡಿನ ಸೊಬಗನ್ನು ಅಕ್ಷರಶಃ ಪದಗಳಲ್ಲಿ ಸೆರೆ ಹಿಡಿದಿದ್ದಾರೆ. ಅಪ್ಪಟ ಒಂದು ಪರಿಸರದ ಕಥನ ಈ ಕರ್ವಾಲೋ.

ಓದುತ್ತಾ ಹೋದಂತೆ ಒಂದು ಕ್ಷಣ ನಾವೇ ಆ ಸ್ಥಳದಲ್ಲಿದ್ದೆವೆನೊ ಎಂಬಂತೆ ಭಾಸವಾಗುತ್ತದೆ. ನೆಚ್ಚಿನ ಕಾದಂಬರಿಗಳಲ್ಲಿ ಯಾವತ್ತಿದ್ದರೂ ಮೊದಲನೇ ಸ್ಥಾನ ಕರ್ವಾಲೋಗೆ. ಪ್ರತಿ ಸಲ ಮರು ಓದುವಾಗಲೂ ಕೂಡ ಮೊದಲನೇ ಬಾರಿ ಓದುತ್ತಿದ್ದೆವೆ ಎಂಬಂತೆ ನಮ್ಮನ್ನು ಹಿಡಿದಿಡುತ್ತದೆ.

http://chavadikatte.blogspot.in/2018/03/blog-post_82.html?m=1

ರಾಜೇಶ್ವರಿ ಲಕ್ಕಣ್ಣವರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಅಪ್ಪಟ ಧಾರವಾಡ ನೆಲದ ಕಾದಂಬರಿ