ಪೆದ್ಗುಂಡನಿಗೆ,


ಲೋ ಪೆದ್ದು, ಅದ್ಯಾವಾಗ ನಿನ್ನ ಕಡೆಗೆ ನನ್ನ ಮನ ಅರಿವಿಲ್ಲದೆ ಜಾರಿತೋ, ನನಗೆ ಅರಿವಿಲ್ಲ. ಮನದಲ್ಲಿ‌ ಹೇಳಲಾಗದ ಸಿಹಿಯಾದ ಸಂಕಟ. ಈ ಸಕ್ಕರೆಯ ನೋವು ಮತ್ತಷ್ಟು ಹೆಚ್ಚಾಗಲಿ, ನಿನಗೂ ಇದರ ಪುಳಕವಾಗಲಿ ಎಂಬ ಸಿಹಿ ಶಾಪ ನಂದು.

ಯಾವಾಗ ನೋಡಿದರು ಮೊಗದಲ್ಲಿ ಮರೆಯಾಗದ ಸಣ್ಣ ಮುಗುಳು. ನಂಗೆ ಅಚ್ಚರಿ ಅದರ ಕುರಿತು, ಈ ನಗುವನ್ನು ನನಗೂ ಹೇಳಿ ಕೊಡು ಎಂಬ ಸಣ್ಣ ತಕರಾರಿದೆ. ಯೂನಿವರ್ಸಿಟಿಯ ಹಸಿರಂತೆ ನನ್ನನ್ನು ಪಟ್ಟನೆ ಚುಂಬಕ ಶಕ್ತಿಯಂತೆ ಸೆಳೆದು ಬಿಟ್ಟೆಯಲ್ಲ ಈ ತಪ್ಪಿಗೆ ಯಾವತ್ತಿಗೂ ಕ್ಷಮೆಯಿಲ್ಲ.

ಪಟ ಪಟನೆ ಅರಳು ಹುರಿದಂತೆ ಮಾತನಾಡುವ ಆ ನಿನ್ನ ಗುಣ, ನಿನ್ನ ಮಗುತನ ಹೇಳ್ತಾ ಹೋದಂಗೆ ಪಟ್ಟಿ ಉದ್ದನೆ ಆಗುತ್ತೆ. ನಾ ಸೋತಿದ್ದು ಎಲ್ಲಿ ಬಲಗಡೆಯ ಕಣ್ಣಂಚಿನ ಪಕ್ಕದ ಸಣ್ಣ ಮಚ್ಚೆಗೋ, ತುಟಿಯ ಕೆಳಗೆ ಬಿಟ್ಟಿರುವ ಸಣ್ಣ ಕುರುಚಲು ಗಡ್ಡಕ್ಕೊ ಅದನ್ನ ನೀನೆ ವಿವರಿಸಬೇಕು.

ಪ್ರೀತಿ - ಪ್ರೇಮ ಪುಸ್ತಕದ ಬದನೆಕಾಯಿ ಅಂತಿದ್ದವಳು, ಇದ್ಯಾವದು ನಂಗಿಷ್ಟ ಆಗೋಲ್ಲ ಅನ್ನುವವಳನ್ನ ಪ್ರೇಮದ ಬಲೆಗೆ ಕೆಡವಿದ್ದು ದೊಡ್ಡ ಅಪರಾಧ ಅದ್ಕೆ ನಿಂಗೆ ನನ್ನ ಯಾವತ್ತು ಬಿಟ್ಟು ಹೋಗಬಾರದು ಎನ್ನುವ ಆಜೀವ ಪರ್ಯಂತ ನನ್ನ ಹೃದಯದಲ್ಲಿ ನೆಲೆಸುವ ಪ್ರೀತಿಪೂರ್ವಕ ಶಿಕ್ಷೆಯನ್ನು ನೀಡಲಾಗುತ್ತದೆ. ಇದಕ್ಕೆ ನೀನು ಮುತ್ತಿನ ದಂಡ ತೆರುತ್ತೆನೆ ಎಂದರು ಬಿಡುಗಡೆ ಮಾತ್ರ ಖಂಡಿತಾ ಇಲ್ಲ.

ನಾನು ನಿಂಗೆ ಯಾವತ್ತೂ ಹಾಗಿರಬೇಕು ಹೀಗಿರಬೇಕು ಎಂದು ಕಂಡಿಷನ್ಸ್ ಹಾಕೋಲ್ಲ. ಆದರೆ ನೀನು ಎಲ್ಲೇ ಇದ್ದರೂ ಮುಂಜಾನೆ ನಾನು ಕಣ್ಬಿಡುವ ಮುನ್ನ ನಿನ್ನ ಗುಡ್ ಮಾರ್ನಿಂಗ್ ಮೆಸೆಜು ನನ್ನ ಇನ್ ಬಾಕ್ಸ್ ಅಲ್ಲಿ ನಗುತ್ತಾ ಕುಳಿತಿರಬೇಕು. ರಾತ್ರಿ ನೀ ಗುಡ್ ನೈಟ್ ಹೇಳಿದ ಮೇಲೆಯೇ ನಾನು ಮಲಗೋದು. ನನ್ನೆಲ್ಲ ಆಸೆ ಕನಸುಗಳಿಗೆ ನೀ ಸ್ಪೂರ್ತಿಯಾಗಿ ನನ್ನ ಜೊತೆಗೆ ಆಸರೆಯಾಗಿ ನಿಲ್ಲಬೇಕು ಅನ್ನೊದು ನನ್ನಾಸೆ. ಇದೆಲ್ಲವನ್ನು ನಿನ್ನ ಹತ್ರ ಸಾರಿ ಸಾರಿ ಹೇಳ್ಬೆಕು. ಹೇಗೆ ಹೇಳೊದೆ ಅನ್ನೋ ಕನಪ್ಯೂಜನ್.. ನಿನ್ನ ಮನಸ್ಸಲ್ಲಿಯೂ ಪ್ರೀತಿ ಇದೆ . ಇದರ ಪ್ರಾಬ್ಲಂ ಅದೇ ನೀನು ಹೇಳ್ತಿಲ್ಲ ನಾನು ಹೇಳ್ತಿಲ್ಲ. ಅದ್ಕೆ ಧೈರ್ಯ ಮಾಡಿ ಪತ್ರ ಬರದಿದೀನಿ. ಇದನ್ನ ನೋಡಿದ ತಕ್ಷಣನಾದ್ರೂ ಬಂದು ಒಪ್ಪಿಕೊಳ್ಳುವ ಧೈರ್ಯ ಮಾಡು. ಇಲ್ಲದೆ ಇದ್ದರೆ ನೋಡು ನಿಂಗೆ..

ನಿನ್ನಿಷ್ಟದ ಬ್ಲ್ಯೂ ಬಣ್ಣದ ಚೂಡಿದಾರ್ ಧರಿಸಿ ಯೂನಿವರ್ಸಿಟಿ ಅಂಗಳದಲ್ಲಿ ನಾನು ಕಾಯ್ತಿರ್ತಿನಿ ಬೇಗ ಬಾ ಜಾಸ್ತಿ ಕಾಯಿಸಬೇಡ..

ಇಂತಿ ನಿನ್ನ ತರ್ಲೆ ಹುಡುಗಿ…     

(ಉದಯವಾಣಿ ಜೋಶ್ ಪುರವಣಿಯಲ್ಲಿ ಪ್ರಕಟಿತ ೨೦-೦೩-೨೦೧೮

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಅಪ್ಪಟ ಧಾರವಾಡ ನೆಲದ ಕಾದಂಬರಿ